ಪದ್ಯ : If u forget me
ಕವಿ : ಪ್ಯಾಬ್ಲೋ ನೆರೂಡಾ
ನಾ ಬಯಸುವೆ ನಿನಗೆ ಏನೋ ಹೇಳಲು
ನಿನಗೆ ಗೊತ್ತೇ ,
ಈ ಶರತ್ಕಾಲದ ಹರಳುಗಟ್ಟಿದ ಚಂದ್ರನನ್ನ ಕಿಟಕಿಯ ಮೂಲಕ ನೋಡುವಾಗ,
ಸುಕ್ಕು ದೇಹದ ಮರದ ಬೊಡ್ಡೆ,
ಹುಸಿ ಬೂದಿಯನೊಮ್ಮೆ ಸ್ಪರ್ಶಿಸಿದರೆ ನನ್ನನು ನಿನ್ನ ಬಳಿಗೆ ತೇಲಿಸಿಬಿಡುತ್ತವೆ .
ಮತ್ತೆ ಮರುಕಳಿಸುತ್ತಿದೆ ನಿನ್ನ ನೆನಪು.
ಆ ಘಮಲು , ಈ ಸುಳಿಬೆಳಕು , ಎಲ್ಲವೂ
ಅಲ್ಲೊಂದಿಷ್ಟು ಪುಟ್ಟ ನಾವೆಗಳು ಚಲಿಸುತ್ತಿವೆ ನೋಡು ನನಗಾಗಿ ಕಾಯುವ ನಿನ್ನ ಸುಪ್ತ ತೀರಕ್ಕೆ..
ಸರಿ ಈಗ
ನೀನು ಚೂರುಚೂರೇ ಪ್ರೀತಿಸುವುದನ್ನು ನಿಲ್ಲಿಸಿ ಬಿಟ್ಟರೆ
ನಾನೂ ಇಷ್ಟಿಷ್ಟೇ ಪ್ರೀತಿಸುವುದನ್ನು ನಿಲ್ಲಿಸುತ್ತೇನೆ
ತಕ್ಷಣಕೆ ಮರೆಯುವಿಯಾದರೆ
ನನ್ನ ನೋಡಬೇಡ
ಈಗಾಗಲೇ ನಿನ್ನ ಮರೆತಾಗಿದೆ .
ನನ್ನ ಜೀವದ ಉಸಿರೂ ಸುದೀರ್ಘವೆಂದು ಆಲೋಚಿಸಿದರೆ ,
ಹೃದಯದ ದಡದಲೇ ಬಿಟ್ಟು ಮುನ್ನೆಡೆಯುವಿಯಾದರೆ ನನ್ನ
ಅಲ್ಲಿ ಆಳಕ್ಕಿಳಿದ ಬೇರುಗಳಿವೆ
ನೆನಪಿಡು ,
ಆ ಬೇರುಗಳನ್ನ ಕಿತ್ತೆಸೆಯುತ್ತಾ ಮತ್ತೊಂದು ಹಿಡಿಯಗಲ ಜಾಗದಲಿ ಮತ್ತೆ ಬೇರೂರುತ್ತೇನೆ
ಮತ್ತೆ ಮೊದಲಿನಂತೆ
ಪ್ರತಿದಿನ , ಪ್ರತಿ ಕ್ಷಣ
ನೀನು ನನಗಾಗಿಯೇ ಅಂತ ಅನೂಹ್ಯ ಮಾಧುರ್ಯದಿಂದ ಅಂದುಕೊಂಡರೆ ,
ಪ್ರತಿದಿನ ತುಟಿಗೆ ಸಾಗುವ ಹೂವ ಹಾದಿಯಲಿ ನಾ ಕಂಡರೆ ,
ಓ ನನ್ನ ಪ್ರೀತಿಯೇ
ನನ್ನೊಳಗಿನ ಬೆಂಕಿ ಮತ್ತೆದ್ದು ಬಂದರೂ ,
ನಾನು , ನನ್ನೊಳಗು ಯಾವುದೂ ತಣ್ಣಗಾಗುವುದಿಲ್ಲ ..
ನಾ ಯಾವುದೂ ಮರೆಯುವುದೂ ಇಲ್ಲ . .
ನಿನ್ನನೇ ಆವರಿಸಿದೆ ನನ್ನ ಪ್ರೀತಿ
ನಿನ್ನನೇ ಅನುಸರಿಸಿದೆ
ಪ್ರಿಯಾ
ನೀನಿರುವವರೆಗೂ ಅದು ನಿನ್ನ ತೆಕ್ಕೆಯಲೇ ಇರುತ್ತದೆ
ನನ್ನ ಬಿಡದೇ ..
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ