ಮೊನ್ನೆ ಮೊನ್ನೆ ಶಿವಮೊಗ್ಗದ ಬಳಿಯ ಹುಣಸೋಡಿನಲ್ಲಿ ಅಕ್ರಮ ಗಣಿಗಾರಿಕೆಯ ಜಿಲಾಟಿನ್ ಸ್ಪೋಟವಾಗಿ ಸುತ್ತಲಿನ ನಾಕು ಜಿಲ್ಲೆಗಳಲ್ಲಿ ಭೂಕಂಪ ಆಯ್ತೇನೋ ಎನ್ನುವಷ್ಟು ಸದ್ದಾಗಿ ಕಿಟಿಕಿಯ ಗಾಜುಗಳು ಆ ವೈಬ್ರೇಷನ್ ಗೆ ಪುಡಿಯಾಗಿ ಒಂದರೆ ಕ್ಷಣ ನಮ್ಮ ಸುತ್ತಲೇ ಇಷ್ಟು ಹತ್ತಿರದಲ್ಲೇ ನಮ್ಮ ವಿನಾಶದ ಮುನ್ನುಡಿ ಇದೆ ಅನ್ನೋದರ ಅರಿವಿರದೇ ಅರಾಮಾಗಿಯೇ ಇದ್ದೆವು. ಮುಂದೂ ಇರ್ತೀವೇನೋ ಆದರೆ ಇದು ಮನುಷ್ಯರ ಕಥೆಯಾಯ್ತು... ನಾವೆಲ್ಲ ಲಾಕ್ಡೌನ್ ಶುರುವಾಗಿ ಮನೆಮನೆಲೂ ಪಾನಿಪುರಿ ಮಾಡಿ ತಿಂದು ಸ್ಟೇಟಸ್ ಹಾಕುವ ಹೊತ್ತಿನಲ್ಲಿ ರಾಷ್ಟ್ರೀಯ ವನ್ಯಜೀವಿ ಮಂಡಳಿ ಅಭಯಾರಣ್ಯ ದಲ್ಲಿಯೂ ಗಣಿಗಾರಿಕೆ ಮಾಡಿ ಅಡ್ಡಿ ಇಲ್ಲ ಎಂಬ ಅನುಮತಿ ಕೊಟ್ಟಿತ್ತು. ಎಸ್ ಇದಾಗಿದ್ದು ಕಳೆದ ಏಪ್ರಿಲ್ ನಲ್ಲಿ ಅಸ್ಸಾಂ ಮತ್ತು ಅರುಣಾಚಲ ಪ್ರದೇಶದ ಮಧ್ಯ ಇರುವ ದಿಹುಂಗ್ ಪಟ್ಕಾಯ್ ಅಭಯಾರಣ್ಯದಲ್ಲಿ ಕಲ್ಲಿದ್ದಲು ಗಣಿಗಾರಿಕೆ ಮಾಡಲು ಪ್ರಧಾನಿಯವರು ಅಧ್ಯಕ್ಷರಾಗಿರುವ ರಾಷ್ಟ್ರೀಯ ವನ್ಯಜೀವಿ ಮಂಡಳಿಯು ಈಶಾನ್ಯ ಕೋಲ್ ಫೀಲ್ಡ್ ಗೆ ಅನುಮತಿ ನೀಡಿದೆ . ದಿಹುಂಗ್ ಎಂದರೆ ಬ್ರಹ್ಮಪುತ್ರ ನದಿ ಮತ್ತು ಪಟ್ಕಾಯ್ ಎಂದರೆ ಪರ್ವತ ಪ್ರದೇಶ ಅಂತ ಅರ್ಥ. ಈ ಪ್ರದೇಶವನ್ನು 2004 ರಲ್ಲಿ ಅಭಯಾರಣ್ಯ ಅಂತ ಘೋಷಣೆ ಮಾಡಲಾಗಿದೆ. ಈ ಅಭಯಾರಣ್ಯವನ್ನು ಪೂರ್ವದ ಅಮೇಝಾನ್ ಕಾಡು ಅಂತಲೇ ಕರೆಯುತ್ತಾರೆ. ಅಷ್ಟು ಶ್ರೀಮಂತ ವನ್ಯಜೀವ ವೈವಿಧ್ಯ ಇರ...