ಈ ಹೆಜ್ಜೆ ಕೆಸರಿನ ಕವಲು ದಾರಿಯಲೀಗ ನನ್ನದೇ ಒಂಟಿ ಹೆಜ್ಜೆಯ ಹುಡುಕಾಟ ಪಾದಕಂಟಿದ ಬಿಳಲುಗಳಿಗೆ ಬೇರಿನ ಕನವರಿಕೆ
ನಾಭಿಯಿಂದೆದ್ದ ಸ್ವರಗಳ್ಯಾಕೊ ಕಿವಿಯ ಆಳವನು ತಲುಪುವಲ್ಲಿ ಸೋಲುತ್ತಾ ಮುಚ್ಚಿಟ್ಟ ಬೆರಳುಗಳ ಸಡಿಲಿಸಲು ಹೆಣಗುತಿದೆ ಕಾಲ
ನಿಲ್ಲುತಿಲ್ಲ ಆಲಾಪ ಸೊಲ್ಲ ಸವರುವ ನೆಪದ ತಂಗಾಳಿ ಸುಡುವುದನು ಬಿಟ್ಟಿಲ್ಲ .
ಎದೆಗತ್ತಲ ಕಿರುದಾರಿಯಲೀಗ ಮಿಂಚುಹುಳದ ಎಡವು ನಡಿಗೆ ಹನಿಬೆಳಕ ಸೋಕಿನಲಿ ಕವಿತೆಗಾಗಿ ತಡವರಿಸುವ ಎಳಸು ಕೈ ..
ಸುರಳಿಗುರುಳಲಿ ಜೋಲಿಯಾಡಿದ ಬದುಕು ನೀಲ ಕಾವಳದ ಮುಸುಕು ಸರಿಸಿ ಬೆಚ್ಚಿ ಬಿದ್ದ ಅಕ್ಷರಗಳ ಹುಡುಕಿ ಹೊರಟ ಅಲೆಮಾರಿ
ಖಾಲಿ ಪುಟಗಳ ರಾಶಿ ನಡುವೆ ನಿರಾಳ ವೈರುಧ್ಯ . ಇರುಳ ಚಂದ್ರನ ಕರುಳಗಾಯಕೆ ಕಣ್ಣೀರಿಟ್ಟ ಮುಗಿಲು
ಬೊಗಸೆಯೊಳಗೆ ದಕ್ಕಿದ ಬೆಳದಿಂಗಳಲ್ಲೀಗ ಮೈ ಸುಟ್ಟ ಕಮಟು ...
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ