ಬೆಳಕ ಜಾಡು
ಕತ್ತಲ ಮರಿಹೂವನ್ನು ಆರಿಸುತ್ತಾ ಬಂದವಳು ಬೆಳಕ ಕವಲುದಾರಿಗೆ ಹೆದರಿದ ಎಳೆಗೆಂಪು ಹೂ
ಹಸಿರುಗತ್ತಲಲಿ ಸಾಗುವ ಆರು ಚಕ್ರದ ಆಮೆಗಾಲಿನ ನಡಿಗೆ ...
ಬೇರಿಗಿಳಿವ ನೋವಿನ ಹನಿಗಳೊಳಗೆ
ಗಾಯಗೊಂಡ ಗರಿಕೆ ಚಿಗುರು
ಮೌನ , ಮತ್ತು , ಬೆಳಕು
ಆಂತರ್ಯದ ಬಟ್ಟಲಿಗೆ ಸುರುವಿಕೊಂಡಷ್ಟೂ ಖಾಲಿಯಾಗುತ್ತಲೇ ಇದ್ದೇನೆ ...
ನನ್ನೊಳಗಿನ ಆ ನಾನೂ..
ಉರಿದೆಸೆದ ಪುಟ್ಟ. ಬೆಳಕ ಬೀಜಗಳೂ ಚಿಗುರೊಡೆವ ಸಂಭ್ರಮಕೆ ತಾಯಾಗುತ್ತಾ
ಕತ್ತಲ ಮೊತ್ತವ ನನ್ನೊಳಗೇ ಇಳಿಸಿಕೊಳ್ಳಲು ಹೆಣಗಾಡುವ ನಾನು .
ಉಸಿರ ತೇಕುತ್ತಾ ಬಂದ ಚಂದ್ರ.
ಉರಿಸಿ ಹೋಗಿದ್ದಾನೆ ಹಲವು ಇರುಳ ... ತೆರೆದ ಎದೆಗಾಯಕೆ
ಮಾಯಕದ ಸುಳಿವು ಆಗೊಮ್ಮೆ ಈಗೊಮ್ಮೆ
ನಿರಂತರ ಹುಡುಕಾಟ ಸುಳಿಬೆಳಕಿಗೂ , ಸುಮ್ಮನಿರಲು ಬಿಡದ ಅಂಬೆಗಾಲಿನ ಆಸೆಗೂಸು , ಕನಸಿನ ಪಳೆಯುಳಿಕೆ ಜೊತೆಯಲಿ
ಮುಗಿಯದ ಮಾತುಕತೆ
ಮುಗ್ಗರಿಸಲು ಹೆಜ್ಜೆಗೊಂದು ಮೈಲಿಗಲ್ಲು
ನಡುವೆ ದಾರಿ ಮರೆತು ಕೂತ ನಾನು ..
ಕಾವ್ಯ ಎಸ್ ಕೋಳಿವಾಡ್
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ