ವಿಷಯಕ್ಕೆ ಹೋಗಿ

ವಾಸ್ತವ

ಕುವೆಂಪುರವರು ಬರೆದ ಮೀನಾಕ್ಷಿ ಮನೆ ಮೇಷ್ಟ್ರು ಅನ್ನೋ ಒಂದು ಕಥೆಯಲ್ಲಿ ಮೇಷ್ಟರು ತನ್ನ ಊಹಾ ಪ್ರಪಂಚದಲ್ಲಿ ಮೀನಾಕ್ಷಿಯ ಬಗ್ಗೆ ಇಲ್ಲದ ಕಲ್ಪನೆ ಕಟ್ಟಿಕೊಂಡು ಕೊನೆಗೆ ಅದು ನೆರವೇರದಿದ್ದಾಗ ಆಕೆಯ ಗಂಡನನ್ನ ಕೊಲ್ಲುವುದಕ್ಕೆ ಹೋಗಿ ಕೊನೆಗೆ ಮನಪರಿವರ್ತನೆ ಮಾಡಿಕೊಂಡು ಬರುತ್ತಾರೆ. ಮೀನಾಕ್ಷಿಯ ಭಾವನೆಗಳೆನು ತನ್ನ ಬಗ್ಗೆ ಎಂಬುದನ್ನು ಮೇಷ್ಟ್ರು ಮರೆತಿದ್ದರು . ಇದು ಪುರುಷ ಪ್ರಧಾನ ಸಮಾಜದ ಒಂದು ಮಜಲು ಅಂತಲೂ ಭಾವಿ‌ಸಬಹುದೇನೋ....ಅಂತದ್ದೇ ಕಥೆ . ಇವಳದ್ದು ಚೂರು ಅಪ್ಡೇಟೆಡ್ ವರ್ಷನ್

ಆತ ಅವಳಿಗೆ ಅಪರಿಚಿತ . ಮುಖತಃ ಭೇಟಿ ಆಗದವರೆಲ್ಲರೂ ಆಕೆಗೆ ಅಪರಿಚಿತರೇ .  ಅದರಲ್ಲೂ ಪರಿಚಯವಾಗಿದ್ದು , ಈ ವರ್ಚುವಲ್ ಪ್ರಪಂಚ , fb , WhatsApp  ನಿಂದ .ಕಾಲೇಜಿನ  ಓದು , ಬರಹ , ಅದು , ಇದು ಅಂತ ತನ್ನದೇ ಪ್ರಪಂಚದಲ್ಲಿ ಮುಳುಗಿಹೋದ ಅವಳಿಗೆ ಬೇರೆಯದೆಲ್ಲ ಅಮುಖ್ಯ . ನಿರ್ದಿಷ್ಟ ಗುರಿಯನ್ನು ಇಟ್ಟುಕೊಂಡು ಮುನ್ನಡೆಯುತಿದ್ದ ದಿಟ್ಟೆ ಅವಳು.
         ವಾಟ್ಸಾಪ್ , ಫೇಸ್ಬುಕ್ ,ಮೊಬೈಲ್ನಿಂದ ಹಾಳಾದ ಐದಾರು ಜನರನ್ನು ಹತ್ತಿರದಿಂದ ನೋಡಿದವಳಿಗೆ ಇದಾವುದೂ ಇಷ್ಟ ಇಲ್ಲ . ಅಪರೂಪಕ್ಕೊಮ್ಮೆ ನೋಡುವವಳು. ತನ್ನ ಅನುಭವಗಳನ್ನ ಹಂಚಿಕೊಳ್ಳೋಕೆ ಇರೋ ಒಂದು ವೇದಿಕೆ ಅಂದುಕೊಂಡಿದ್ದಳು . ಪುಟ್ಟಿ ಹುಷಾರು ಅಂತ ಕಾಳಜಿ ತೋರಿಸುವ ಅಣ್ಣಂದಿರೂ ಆಕೆಗಿದ್ದಾರೆ ಈ ವರ್ಚುವಲ್ ಪ್ರಪಂಚದಲ್ಲಿಯೇ.
      ತನ್ನ ಸುಮಾರಾದ  ಎರಡು ಬರಹಗಳಿಗೆ ವಾವ್ ,ಸುಪರ್ ,ಅದ್ಭುತ , ಅಂತ ಶುರುವಾಯ್ತು ಮಾತುಕತೆ , ತನ್ನ ಓದನ್ನ ಬಿಟ್ಟು , ಬೇರೆಯದೇನೂ ಹೇಳಿಕೊಳ್ಳಲು ಹೋಗಲಿಲ್ಲ ಆಕೆ . ಆದರೂ ಆಗಾಗ ಯಾಕೋ ಮಾತು ಟ್ರ್ಯಾಕ್ ಚೇಂಜ್ ಆಗ್ತಿದೆ ಅನಿಸತೊಡಗಿತು ಅವಳಿಗೆ . ಇವಳು ಕಣ್ಣ ಮುಂದಿರೋ ಕನಸುಗಳಿಗೆ ನೀರೆರೆಯುತ್ತಾ ಇದ್ದರೆ ಅತ್ತ ಅವನು ತನ್ನ ಕಲ್ಪನೆಯಲ್ಲಿ ಏನೆನೋ ಯೋಚಿಸಿ ಬಣ್ಣ ಹಚ್ಚತೊಡಗಿದ್ದ .
     ಇವಳಿಗೆ ಆತ ಒಂದೆರಡು ಬಾರಿ ತನ್ನ ಇಚ್ಛೆಯನ್ನ ಡೈರೆಕ್ಟಾಗಿ ತಿಳಿಸಿದರೂ ಅದನ್ನು ಆಕೆ ನಯವಾಗಿ ತಿರಸ್ಕರಿಸಿದ್ದಳು. ತನ್ನ ಇತಿಮಿತಿ‌, ಬಡತನ , ಮುಂದೆ ಓದಬೇಕಾದ ಕನಸು , ಇದರ ಮುಂದೆ ಎಲ್ಲವೂ ಆಕೆಗೆ ನಗಣ್ಯ .
      ಪ್ರೌಢತೆಗೆ ಜಾರದೇ ಮುಗ್ದತೆಯ ನಡುವಲ್ಲಿ ಇದ್ದವಳು ಅವಳು . ಕೊನೆಯವರೆಗೂ ವಿಷಯ ಅಷ್ಟು ಸಿರಿಯಸ್ ಆಗುತ್ತೆ ಅಂತ ಅವಳ ಪೆದ್ದು ಮನಸು ಊಹಿಸಿರಲಿಲ್ಲ.
ಯಾವುದೂ ಜಾಸ್ತಿ ಆಗೋದು ಬೇಡ ಅಂತ ಅವಳು ತೋರಿದ ಉದಾಸೀನವನ್ನು ಆತ ಮೌನಂ ಸಮ್ಮತಿ  ಲಕ್ಷಣಂ ಅಂತ ಅಂದುಕೊಂಡಿದ್ದ . ತನ್ನಲ್ಲಿ ಏನೇನೋ ಬದಲಾವಣೆ ಮಾಡಿಕೊಂಡ , ಎಲ್ಲವೂ ಆಕೆಗಾಗಿ ಅನ್ನೋ ಅಂಬೋಣ ಅವನದ್ದು .

ಈ ಏಕ ಮುಖಿ ಬಂಧ , ಸೋ ಕಾಲ್ಡ್ ಲವ್ ಎಷ್ಟು ದಿನ ಇದ್ದೀತು ? ಅವನು ಮಾತ್ರ ಅವಳಿಗಾಗಿ ಬದಲಾದ . ನನಗಾಗಿ ನೀನೂ ಬದಲಾಗು ಅಂತ ಒತ್ತಡ ತಂದ . ಜೊತೆಗೆ ಅತಿಯಾಗಿ ಪೊಸೆಸಿವ್ ಕೂಡ ಆದ , ಇವಳು ಪ್ರತಿಯೊಂದನ್ನೂ ವಿರೋಧಿಸಿ ,ಜಗಳ ಕೂಡ ಆಡಿದಳು . ನನಗೆ ಇವೆಲ್ಲ ಇಷ್ಟ ಆಗಲ್ಲ .  i dont entertain . ಅಂತ ,ಅವನು ಯಥಾವತ್ ಹಾಗೇ ಇದ್ದ .

ಈ ಕಥೆ ಮುಂದೆ ಏನಾಗುತ್ತಿತ್ತೋ ಏನೋ ... ಆದರೆ ಅವಳು ಈ ವಿಚಾರವನ್ನು ಯಾರಿಗೂ ಹೇಳದೆಯೇ , ತನ್ನಲ್ಲಿಯೇ ಇಟ್ಟುಕೊಂಡು ಕೊರಗಿದಳು. ಮುಂದೆ ಆಗಬಹುದಾದ ಅನಾಹುತ , ಹಿಂದೆ ಮುಂದೆ ಯೋಚಿಸದೇ ಆತ್ಮಹತ್ಯೆ ಯ ದಾರಿ ಹಿಡಿದಳು. ಇವತ್ತಿಗೆ ಅವಳು ಸತ್ತು  ಐದು ವರ್ಷ . ಕನಸಿಗೆ ಬಣ್ಣ ಹಚ್ಚುತ್ತಾ ಕೂತವ ಕೂತಿದ್ದಾನೆ ಹಾಗೆಯೇ , ಇಲ್ಲಿ ಈಕೆಯ ಜೀವ ಬಣ್ಣ ಕಳೆದುಕೊಂಡಿದೆ.

ಅವಳು ಯಾವುದನ್ನು ಜಸ್ಟ್ , fb ಚಾಟ್ ಅಂತ ಇಗ್ನೋರ್ ಮಾಡಿದ್ಲೋ ಅದೇ ಇವತ್ತು ಅವಳ ಜೀವಕೆ ಕುತ್ತು ತಂದಿತ್ತು . ಇದನ್ನವಳು ಅಪ್ಪ ಅಮ್ಮನಿಗೆ ಹೇಳಬಹುದಿತ್ತಲ್ವಾ... ? ಅಪ್ಪ-ಅಮ್ಮನ ಬಳಿ ಹೇಳಿಕೊಳ್ಳಲಾಗದೇ ಇರುವಷ್ಟು ಈ ಮೆಟಿರಿಯಲಿಸ್ಟಿಕ್ ಆಗಿದ್ದಾವೇ ಈಗಿನ ಮಕ್ಕಳು ? 
ಹುಚ್ಚು ಕಲ್ಪನೆಗಳನ್ನು ಕಟ್ಟಿದ ಆತನ ತಪ್ಪೋ ? , ಆ ಕಲ್ಪನೆಗೆ ಹೆದರಿ ಬಲಿಯಾದ ,ಮೃದು ಮನಸಿನ ಇವಳ ತಪ್ಪೋ? ಅಥವಾ ವಾಟ್ಸಾಪ್ ,ಎಫ್ಬಿ ಯ ಇನ್ನೊಂದು ಕರಾಳ ಮುಖವೇ ...?

ಸ್ನೇಹಿತೆಯ ಈ ಸಾವು ಎಷ್ಟು ಬಾಲಿಷ ಅನಿಸಿಬಿಡುತ್ತೆ  ಎಷ್ಟೋ ಬಾರಿ . ಅವಳ ಜೊತೆಗೆ ಅವಳ ಅಪ್ಪ ಅಮ್ಮನ ಕನಸು ಕೂಡ ಸುಟ್ಟುಹೋಗಿದೆ.  ಮುಂದೆ ಆಗಬಹುದಾದ ಅವಘಡಗಳ ನೆನೆದು ಸಮಾಜದ ಎದುರು ಆಗಬಹುದಾದ ಅಪಮಾನ ಊಹಿಸಿ ಜೀವಕೆ ಅಂತ್ಯ ಹಾಡಿದ ಹುಡುಗಿ ಬಗ್ಗೆ ಛೇ ಅನಿಸುತ್ತೆ.

ಇದಕ್ಕೆ ಕಾರಣನಾದ ಆತ ತನ್ನಪಾಡಿಗೆ ತಾನಿದ್ದಾನೆ . ಎರಡೋ ಮೂರೋ ಭಗ್ನ ಕವಿತೆ ಬರೆದುಕೊಂಡು .

ಇನ್ನೊಬ್ಬರ ಭಾವನೆಗೆ ಬೆಲೆಕೊಡದ ಅವನು , ಭಾವನೆಯನ್ನು ಅತಿಯಾಗಿ ಹಚ್ಚಿಕೊಂಡ ಇವಳು. ತಪ್ಪು ಯಾರದು ಎಂಬ ಗೊಂದಲ ಮನಸಿಗೆ ..‌ ಮಿಸ್ ಯು ಕಣೇ. ಅಲ್ಲಿ ಕತೆ ಸುಖಾಂತ್ಯ ಆದ್ರೆ ಇಲ್ಲಿ ..?

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕುವೆಂಪುರವರ ಕಲ್ಕಿ ಬಗೆಗೆ ಒಂದು ಅಭಿಪ್ರಾಯ

ಯಾರವನಲ್ಲಿ ದೂರದಲಿ... ಧಾವಿಸಿ ಬರುತಿಹ ಕ್ರೌರ್ಯದಲಿ... ಹಸಿವೆ....ದಾಹ....ರಕ್ತಾ..... ಇನ್ನೂ ಹಸಿವೆ    ಬಡವರ ಹೊಟ್ಟೆಯ ಬೆಂಕಿಯ ಹಸಿವೆ ಇನ್ನೂ ದಾಹ    ಬಡವರ ಗಂಟಲ ಬೇಗೆಯ ದಾಹ... ತುಂಬದೋ ಹೊಟ್ಟೆ ...         ಈ ಸಾಲುಗಳ...

ಮುಖವಾಡ

ಯಾವುದೋ ಊರಿನ ಸಂತೆ ನೆರೆದಿತ್ತು ಎಲ್ಲೆಡೆಯೂ ಗದ್ದಲ ಹಣ್ಣಿನಂಗಡಿ,  ತರಕಾರಿಯಂಗಡಿಗಳ ನಡುವಲ್ಲಿ ಜನರಿಂದ ಗಿಜಿಗುಡುವ ಒಂದು ಅಂಗಡಿ ಅದೇ ಮುಖವಾಡದಂಗಡಿ ಮುಖವಾಡ,  ಮುಖವಾಡ,  ತನ್ನತನವನೇ ಮರೆಯಿಸುವ ...

ಸಿಹಿ ನೆನಪಿನ ಸಂಚಿ

ನೀ ನನ್ನ ಸ್ವಂತ ಎಂಬ ಕನವರಿಕೆಯಲಿ ನೀನೀಗ ನನ್ನ ಜೊತೆಯಿಲ್ಲ ಎಂಬ ಕನಲಿಕೆಯೂ ಇದೆ ಈ ಕನಲಿಕೆ, ಕನವರಿಕೆಗಳ ನಡುವಲೂ ಒಂದು ಸಿಹಿಸುಖದ ಉಲುಹು ಇದೆ ಅದು ಸದಾ ನಿನ್ನನೇ ನೆನಪಿಸುತ್ತಿದೆ.