ಕಥೆ : ಕೊಳಲನೂದಿದ
ಪುಸ್ತಕ : ಎಚ್ಚರದ ಕನಸು
ಲೇಖಕರು : ವೀಣಾ ಬನ್ನಂಜೆ
ಹೌದಪ್ಪಾ ಹೌದೋ ನೀನೇ ದೇವರ...
ನಿಂದ ನೀ ತಿಳಿದರ ನಿನಗಿಲ್ಲೋ ದೂರ ...
ಷರೀಫರ ಈ ಹಾಡು ಇವತ್ತು ಯಾಕೋ ಬಹಳ ನೆನಪಾಗ್ತಿದೆ .
ನಿದ್ದಿಯೊಳಗೂ ಸದಾ ಎಚ್ಚರವಿರಬೇಕು
ಸೆರೆ ಕುಡಿಯದೇ ನಶೆ ಹತ್ತಿರಬೇಕು
ಅಂತ ಮುಂದುವರಿಯುತ್ತೆ . ಎಚ್ಚರದಲ್ಲಿದ್ದಾಗ ಕನಸು ಬೀಳದು. ಬಿದ್ದರೂ ಅದು ಕನಸೇ ಅಲ್ಲ.
ಇಂದು ವೀಣಾ ಬನ್ನಂಜೆಯವರ ಕಥಾ ಸಂಕಲನ " ಎಚ್ಚರದ ಕನಸು " ಓದಿ ಮುಗಿಸಿದೆ. ಒಂದೇ ಓದಿಗೆ ದಕ್ಕದ ಬರಹಗಳವು. ಆದರೆ ಒಂದೊಂದು ಬಾರಿ ಓದಿದಾಗಲೂ ಸಹ ಒಂದೊಂದು ಹೊಳಹು ನೀಡಬಲ್ಲ ಕಥೆಗಳು .
ಕೇವಲ ಕಥೆ ಅನ್ನುವುದಾ ಇದಕ್ಕೆ ...? ಒಮ್ಮೊಮ್ಮೆ ನನ್ನದೇ ಮನದ ಬಿಕ್ಕಳಿಕೆ ,
ನಾನು ಕಲ್ಪಿಸಿಕೊಂಡ ಭಾವನೆಗಳ ಹುಚ್ಚು ಲೋಕವ ಮೀರಿ ಹೊರಬರುವ ತುಡಿತ , ಕನವರಿಕೆಗಳು ಒಂದೇ ಬಾರಿಗೆ ವ್ಯಾಮೋಹದ ಹುಚ್ಚು ಹೊಳೆಯಲ್ಲಿ ತೇಲಿಹೋಗುವಾಗ ಸಿಕ್ಕ ಆಸರೆಯಂತಾದ ಹುಲ್ಲುಕಡ್ಡಿಯಂತೆ .
ನನ್ನನು ನಾನು ಕಲ್ಪಿಸಿಕೊಂಡ ಊಹಾಪ್ರಪಂಚ ಎಷ್ಟು ಸೂಕ್ಷ್ಮ , ಥೇಟ್ ಗಾಜಿನಂತೆ .ಅದನ್ನು ಒಡೆಯುವ ಕಲ್ಲಿನಂತೆ ಈ ಬರಹ ಎಂದರೆ ತಪ್ಪಾಗಲಿಕ್ಕಿಲ್ಲ.
ಇಲ್ಲಿ ಬರುವ ನಿರೂಪಕಿಯ ಅಪ್ಪ , ಅವಳ ಗುರು , ಅವಳ ಆತ್ಮಸಖ , ಎಲ್ಲವೂ ಆದ ಅವನು ಹೇಳಿದ ಮಾತುಗಳು ಇನ್ನೂ ಮನದಲ್ಲಿ ಆವರಿಸುತಿದೆ.
" ಮಗೂ, ನಿನ್ನ ದುರ್ಬಲ ಕೋಶದೊಳಗೊಂದು ಗಟ್ಟಿ ವಜ್ರದ ಕೂಸಿದೆ. ಆ ಕೋಶ ಹರಿಯುವುದಷ್ಟೇ ನನ್ನ ಕೆಲಸ ."
ಒಮ್ಮೆ ಅಂತರ್ಮನನ ಮಾಡಿಕೊಂಡರೆ ನಾವೆಲ್ಲರೂ ಆ ಗಟ್ಟಿ ವಜ್ರದ ಕೂಸನ್ನೇ ಹುಡುಕುತ್ತಾ ಜೀವನ ಕಳೆಯುತ್ತೇವೆ . ಅದು ನಮ್ಮೊಳಗೆ ಇರುವುದು ಮರೆತೆ ಹೋಗಿರುತ್ತದೆ.
ಕವಲೊಡೆದ ಹಾದಿಗಳು , ಕವಿದಿಹುದು ಕತ್ತಲೆಯು , ಮನವೇ ಬಲುಜೋಕೆ . ಎಂದು ಎಚ್ಚರಿಸುತ್ತಲೇ ಸಾಗುತ್ತದೆ ಕಥೆ .
ಅಜ್ಞಾನದ ಪೊರೆಯೊಳಗೆ ಸಿಲುಕಿರುವ ಅಂತರ್ಶಕ್ತಿಯನ್ನು , ಅಂತರಚೇತನವನು ಬಡಿದೆಬ್ಬಿಸುವ ಕೂಗು ಅದು. ಆ ಅಜ್ಞಾನದ ಪೊರೆ ಹರಿಯುವುದು ತನಗಿಂತ ಭಿನ್ನ ನಾದವನಿಗೆ ಮಾತ್ರ ಸಾಧ್ಯ ಅನ್ನೋದು ಇಲ್ಲಿ ಅಭಿವ್ಯಕ್ತಗೊಂಡಿದೆ .
ಕೃಷ್ಣನಿಂದ ಮೊದಲು ದೇಹಸುಖಕೆ ಮನಸು ಸ್ಪಂದಿಸಿದರೂ ಸಹ , ಸ್ಪಂದಿಸಬೇಕಾದದ್ದು ಮನಸು ದೇಹವಲ್ಲ. ಎಂದು ಎಚ್ಚರಿಸುತ್ತಾನೆ .
ಅವಳ ಮಡಿಲ ಮಗುವಾಗಿ , ಕಾಳಜಿ ತೋರುವ ತಂದೆಯಾಗಿ , ಅವಳ ಸಖನಾಗಿ , ಕೊನೆಗೆ ಆತ್ಮಸಖನೂ ಆಗಿಬಿಡುತ್ತಾನೆ .
ಸೋತು ಬಂದೆನೋ ಗುರುವೇ ನಿನ್ನ ಬಳಿಗೇ
ಸೋತ ಜೀವವನಾತುಕೋ ಒಂದು ಘಳಿಗೆ
ಎನ್ನುತಾ ಆತ್ಮ ಸಮರ್ಪಣೆ ಮಾಡುತ್ತಾಳೆ .
ಮೊದಲು ಹೊರಗಿರುವವರಿಗೆ ನಿನ್ನನು ತೋರುವುದನು ನಿಲ್ಲಿಸು , ತೋರಿಕೆ ಅವಸಾನಕೆ ಮೂಲ ಅಂತ ಕೃಷ್ಣ ಅವಳಿಗೆ ಹೇಳುವ ಮಾತುಗಳು ಪ್ರತಿಯೊಬ್ಬ ಓದುಗನಿಗೂ ಹೇಳಿದಂತೆ ಆಗುತ್ತದೆ.
ಹೇಳಬೇಕಾದದ್ದನ್ನು ಬೇರೆಯದೇ ರೀತಿಯಲ್ಲಿ ಹೇಳುತ್ತಾ ಹೋಗಿ , ಅದನ್ನು ಅರ್ಥದ ಪರಿಧಿಗೆ ಸಿಲುಕಿಸದಂತಹ ಕಥೆ ಕೊಳಲನೂದಿದ .
ಕಥೆ ಕಟ್ಟುವ ಶೈಲಿ ಬಹು ವಿಭಿನ್ನ . ಪದಗಳೊಳಗೆ ಗೂಢಾರ್ಥವನಿಟ್ಟು ಬರೆದಿರುವುದರಿಂದ ಹೊಸ ಓದುಗನಿಗೆ ತಕ್ಷಣ ಅರ್ಥವಾಗುವುದಿಲ್ಲ. ಕುವೆಂಪುರವರ ಥರ ಸ್ವಪ್ನಾ ಪ್ರಪಂಚವನ್ನು ಸಮರ್ಥವಾಗಿ ಆಧ್ಯಾತ್ಮಿಕ , ವೈಜ್ಞಾನಿಕ , ಕಾವ್ಯಗಳ ದಿವ್ಯ ಸಂಗಮವನ್ನಾಗಿ ಮಾಡಿದ್ದಾರೆ . ವೀಣಾ ಬನ್ನಂಜೆಯವರು.
ಈ ಓದಿನ ಹ್ಯಾಂಗೋವರ್ ನಿಂದ ಹೊರ ಬಂದಿಲ್ಲ ಇನ್ನೂ............
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ