ವಿಷಯಕ್ಕೆ ಹೋಗಿ

ಚುಟುಕು ಪ್ರೀತಿಯ ಗುಟುಕು

 
ಅವನ ಪ್ರತಿ ಮುತ್ತಿನಲೂ
ಹದವರಿತ ಮಳೆಯ ಮಣ್ಣಿನ ಘಮಲಿದೆ....
ಗುಂಡು ಗಲ್ಲವ ತೋಯಿಸಿದ್ದಾನೆ
ಈ ಹಗಲಿಗೆ ,
ರಾತ್ರಿಯೇಕೋ ಇನ್ನೂ ಮಿಸುಕುತಿದೆ

ಬಿಟ್ಟಿ ಗಾಳಿಗೆ ಅಲೆಯು
ತೂಕಡಿಸುತ್ತಿದೆ
ಅದೇನೋ ಒಣವ್ಯಾಮೋಹ
ಚಂದಿರನೊಂದಿಗೆ ಅಲೆಗಳಿಗೆ
ಕಾಣುವಾಗ ಉಬ್ಬುತ್ತದೆ ಸುಖಾಸುಮ್ಮನೇ..

ಬೀಸಿದ ಚುಂಬಕ ಗಾಳಿ ಗುಳಿ ಇಲ್ಲದ ಕೆನ್ನೆಯಲೂ ಇನ್ನಿಲ್ಲದ ಕೆಂಪು ತುಂಬುತ್ತದೆ. ಇವಳ ಅಲೆಮಾರಿ ಮನಸು ಕಾರ್ತಿಕದ ದೀಪ ಹಚ್ಚುತ್ತದೆ. ಬೆಳಕಿನಲಿ ಬಾಳ ಕವಿತೆ ಹೆಣೆಯುತಿದೆ.

ಅವನೊಂದು ನೆರಳ ಸೆರಗು
ನೆನಪಿನಲ್ಲೇ ನೆರಿಗೆ ಮಡಚುತ್ತಾನೆ
ಇವಳೊಳಗಿನ ಏಕಾಂತವು
ಜಾರುವುದು ಆವಾಗಲೇ
ಎಣ್ಣೆ ಇರದ ಹಣತೆ ಅವನು ಚುಂಬಿಸಿದಾಗ ಒಲವ ಹಚ್ಚುತ್ತಾನೆ ಗೊತ್ತಾಗದೇ

ವಿಲೇವಾರಿ ಆಗದ ಹುಸಿ ಕನಸಿನ ಮೇಲೆ ಮತ್ತೆ ಒಟ್ಟುತ್ತಲೇ ಇದ್ದಾಳೆ ಮತ್ತೊಂದು ಮರಿಗನಸನು
ಅಲೆಮಾರಿ ಮನಸು ವಿರಮಿಸುತಿದೆ ಅವನ ಕಿರುಬೆರಳ ಸಾಮೀಪ್ಯ ನೆನೆದು

ಪ್ರಬುದ್ಧ ಆಸೆಯೊಂದನ್ನು ಜೀವಂತವಿರಿಸುವ ಸಲುವಾಗಿ
ಕನಿಷ್ಟ ಪ್ರಯತ್ನ ಮಾಡುತ್ತಾಳೆ ತನ್ನಷ್ಟಕ್ಕೆ
ಹೆಜ್ಜೆ ಮೇಲೆ ಹೆಜ್ಜೆಯ ಮುತ್ತಿಡುವ
ಇವಳ ಕೋರಿಕೆ ಚಳಿಯಲ್ಲೂ ಬೆಚ್ಚಗಿರಿಸುತ್ತದೆ ಅವನೆದೆಯನ್ನು

ಹಿಡಿ ಪ್ರೀತಿಗಂಟನು ಹೊತ್ತು ತಂದಿದ್ದಾನೆ ಈ ಹುಣ್ಣಿಮೆಗೆ
ಬುತ್ತಿ ಬಿಚ್ಚಿ ರುಚಿ ನೋಡುವ ತವಕ ಇವಳಿಗೆ  .. ಎಷ್ಟಾದರು ಹುಡುಗ ಅವನು  ಕಾಯಿಸುತ್ತಲೇ ಇದ್ದಾನೆ ಇಲ್ಲದ ಮುರಳಿಗೂ ಮನಸೋಲೋ ರಾಧೆ .

ಎದೆ ಕವಾಟದಲ್ಲಿ ಬಚ್ಚಿಟ್ಟ ಹೆಸರನ್ನು
ಒಂಟಿಯಾಗಿ ತೆರೆಯುವ ಇವಳ
ಅಭಿಲಾಷೆ ನೋವನ್ನೂ ಮುಂದೂಡುತ್ತದೆ
ಎಲ್ಲೂ ಇರದ ವಿಶೇಷ ಅನುಭೂತಿ ಪ್ರಸವಿಸುವುದೂ  ಅಲ್ಲಿಯೇ

ನವಿಲುಗರಿಯ ತರ ಕೂದಲ ಚಿಮ್ಮಿಸಿ , ಎದೆಗೊರಗಿಸಿ ಬಿಸಿಯುಸಿರಿನ ತಿದಿ ಒತ್ತಿ , ಮುಂಗುರುಳಿನ ತಂತಿ ಮೀಟುವಾಗ
ಅಮಲುಗಣ್ಣೂ ಅವಳಿಂದ ಕವನ ರಚಿಸುತ್ತದೆ. ಜೀವದ ರಾಗ ಹಾಡಿಸುತ್ತಿದೆ..

ಅವಳ ಕೆನ್ನೆಯಂಗಳದ ಮೇಲೆ
ನಕ್ಷತ್ರಗಳ ಚೆಲ್ಲಿ ಕವಿತೆ ಅನ್ನುತ್ತಾನೆ
ಕಣ್ಣೊಳಗಿನ ದೀಪದ ಬೆಳಕಿನ ಮುಂದೆ ನಕ್ಷತ್ರವೂ ಮಂಕು
ಬೆರಳಿಗಂಟಿದ ಜೇನು ಸಾಂತ್ವನಿಸುತ್ತದೆ ಪಾಪದ ಹುಡುಗನನ್ನೂ.. ಅವಳ ಕಣ್ಣ ಕಾಡಿಗೆಯನೂ....

ಇವಳ ಕವನದ ಪದಗಳೆಲ್ಲವೂ
ಅವನ ಹುರಿಮೀಸೆಯನ್ನು ಮುತ್ತುತ್ತವೆ
ಹಾಸುಬೆನ್ನಿನಲ್ಲಿ ಅವನು ಬಿಡಿಸಿದ
ಚಿತ್ರಕ್ಕೆ ಕಳೆ ಬರುವುದು ಅಲ್ಲಿಯೇ
ಎದೆತೇರೆಳೆಯುವ ಕುವರನಿಗೆ
ಮುಂಗುರುಳಿನಲ್ಲಿ ಆಮಂತ್ರಣ ಕೊಡುತ್ತಾಳೆ...

*ಕಾವ್ಯ ಜುಗಲ್ಬಂದಿ*

ಪದ ಸಾನಿಧ್ಯದಲಿ ಅವಿಜ್ಞಾನಿ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕುವೆಂಪುರವರ ಕಲ್ಕಿ ಬಗೆಗೆ ಒಂದು ಅಭಿಪ್ರಾಯ

ಯಾರವನಲ್ಲಿ ದೂರದಲಿ... ಧಾವಿಸಿ ಬರುತಿಹ ಕ್ರೌರ್ಯದಲಿ... ಹಸಿವೆ....ದಾಹ....ರಕ್ತಾ..... ಇನ್ನೂ ಹಸಿವೆ    ಬಡವರ ಹೊಟ್ಟೆಯ ಬೆಂಕಿಯ ಹಸಿವೆ ಇನ್ನೂ ದಾಹ    ಬಡವರ ಗಂಟಲ ಬೇಗೆಯ ದಾಹ... ತುಂಬದೋ ಹೊಟ್ಟೆ ...         ಈ ಸಾಲುಗಳ...

ಮುಖವಾಡ

ಯಾವುದೋ ಊರಿನ ಸಂತೆ ನೆರೆದಿತ್ತು ಎಲ್ಲೆಡೆಯೂ ಗದ್ದಲ ಹಣ್ಣಿನಂಗಡಿ,  ತರಕಾರಿಯಂಗಡಿಗಳ ನಡುವಲ್ಲಿ ಜನರಿಂದ ಗಿಜಿಗುಡುವ ಒಂದು ಅಂಗಡಿ ಅದೇ ಮುಖವಾಡದಂಗಡಿ ಮುಖವಾಡ,  ಮುಖವಾಡ,  ತನ್ನತನವನೇ ಮರೆಯಿಸುವ ...

ಸಿಹಿ ನೆನಪಿನ ಸಂಚಿ

ನೀ ನನ್ನ ಸ್ವಂತ ಎಂಬ ಕನವರಿಕೆಯಲಿ ನೀನೀಗ ನನ್ನ ಜೊತೆಯಿಲ್ಲ ಎಂಬ ಕನಲಿಕೆಯೂ ಇದೆ ಈ ಕನಲಿಕೆ, ಕನವರಿಕೆಗಳ ನಡುವಲೂ ಒಂದು ಸಿಹಿಸುಖದ ಉಲುಹು ಇದೆ ಅದು ಸದಾ ನಿನ್ನನೇ ನೆನಪಿಸುತ್ತಿದೆ.