ವಿಷಯಕ್ಕೆ ಹೋಗಿ

ಆಲಾಪ

ಮನದ ಭಿತ್ತಿಯ ತುಂಬ
ಬರೆಯದಿರುವ ನಿನ್ನ ಚಿತ್ರ
ಗೆರೆಯ ಅಳಿಸಿ ಹಾಕುವ
ಮೊದಲು ನಡೆದುಬಿಡಲಿ
ಸಾಂಗತ್ಯ
ನಿನಗೆ ಇದೆಲ್ಲ ಅಸಂಗತ .
ನೀ ವಾಸ್ತವದಲಿ..

ಖಾಲಿ ಹಾಳೆಯ ಮೇಲೆ
ಸುರಿದ ಶಾಹಿಯಂತೆ
ಮನವೆಲ್ಲ ಅಮೂರ್ತ ರೇಖೆ
ಗಳಾಗುತಿವೆ ಹುಡುಗಾ
ವಾಸ್ತವದಲ್ಲಿ ತೂತು ಮನಸಿನ
ಫಕೀರನು ಈ ಜಂಗಮ

ಮನದ ನಭದಲಿ ಖುಷಿ
ಕನ್ನಡಿಯ ಚೂರು ಚೆಲ್ಲಿದ್ದೇನೆ
ಮುದ್ದು ಸುರಿವ ನಿನ್ ಮೊಗದ
ಪ್ರತಿಬಿಂಬ ಅದರಲ್ಲಿ
ಯಾರೊ ಕವಿ ಹೆಸರಿಸಿದ ಅದನ್ನು ನಕ್ಷತ್ರವೆಂದು

ತಾರೆಗಳ ಲೆಕ್ಕಿಸುವಾಗ
ಅಚಾತುರ್ಯದ ಹೊಳಿಯುವಿಕೆ
ಅವನಾದ ಒಣ ನೋವಂತೆ
ಆರದ ಗಾಯದಂತೆ ಸೋನೆ
ಮಳೆ ಮುತ್ತಿಡುವ ಬರಡು ಭೂಮಿಯಂತೆ ನನ್ನೊಳಗೆ
ಕಾರಣವಿಲ್ಲದೇ ಕಳೆದೋದ
ಹೃದಯದ ಪತ್ತೆ ಇನ್ನಾಗಬೇಕಷ್ಟೆ..!

ಕಿರು ಬೆರಳ ಸಂಧಿಯೊಳಗೆ
ಮುಂಗುರಳೊಂದು ಅನಾಮತ್ತಾಗಿ
ಸಿಕ್ಕಿ ಅನಾಮಧೇಯ ಕನಸಿಗೆ ಹೆಸರಿಡುವಂತೆ ತಾಕೀತು ಮಾಡುತ್ತದೆ ಹುಡುಗಿ

ಮುಂಗುರುಳಿನ ಹಿಂದಿರೊ ಮನಸು ನೋಡುವ ಕಣ್ಣು ನಿನ್ನದಾಗಲಿ ಹುಡುಗ
ಆ ಮನಸಿನೊಳಗೊಂದು
ಭಾವನೆಯ ನಿಲ್ದಾಣವಿದೆ.
ನಿನ್ನಂತವರು ಹಲವರು
ವಿರಮಿಸಿ ನಡೆದಿದ್ದಾರೆ

ಅದೇ ಹಾದಿಗೆ ಹೆಜ್ಜೆಯಾಗುವಾಗ
ಎಡವಿ ಬಿದ್ದ ಪಾದವು ನಾಮ ಸ್ಮರಣೆ ಮಾಡುತ್ತದೆ
ಯಥಾಪ್ರಕಾರ ಸತ್ತ ಭಾವನೆಗಳು ಮೂಟೆಯಂತೆ ಎದುರಾಗುತ್ತದೆ
ಎಲ್ಲ ಮಹಾ ಜನಗಳ ಕೋರಿಕೆ ಆಲಿಸುವವಳೇ ನಿನ್ನ ತಾರೀಪು
ಮಾಡಬೇಕಾಗುತ್ತದೆ

ನೀ ಯಾವತ್ತೂ ಹೀಗೇ
ಅರ್ಥಕೆ ನಿಲುಕದ ಭಾವಭಾಷೆಯಲಿ
ಮಾತಾಡಿ ,
ಮೌನ ತಾನದಲಿ
ಉತ್ತರಿಸಿ ಬಿಡುವವನು .
ಅರ್ಥದ ಸಾರ್ಥಕ್ಯ ಅಂದ್ರೆ ಅದೇ ಇರಬೇಕು

ಬರಡಾದ ಭಾವನೆಗೆ ಭಾಷೆಯ
ಹಂಗೊಂದು ಏಣಿಯಾಗಲಾರದು ಹುಡುಗೀ
ಸವೆದ ದಾರಿಯಲ್ಲಿ ಸೋನೆ ಮಳೆಯಾಗುವಾಗ
ಸೋತ ಎದೆಯಲ್ಲೊಂದು ಕಾಡ ಹೂವು ಬಿರಿಯುತ್ತದೆ.

ಮನದ ಮರ್ಮರ ಕೇಳುವ ಕಿವಿ ಈಗ ಕಿವುಡಾಗಿದೆ
ಒಲುಮೆ ಬತ್ತಿದೆದೆಯಲಿ
ಹುಟ್ಟೀತಾದರೂ ಏನು ?
ನಿರೀಕ್ಷೆ ಯ ಹನಿಮಳೆಯ ಸಾಂತ್ವನ ಮಾತ್ರ ಮನಸಿಗಿದೆ‌ ...

ಕಿವಿಗಳೆರಡು ಬಂಜೆಯಾಗುವಾಗ
ನಿಷ್ಫಾಪಿ ಸ್ವರಪೆಟ್ಟಿಗೆಯೊಳಗೊಂದು ಕಲಹವಾಗುತ್ತದೆ
ಸಾಂತ್ವನದ ವಾಗ್ಧಾನ ನೀಡಿದ ನಾಲಿಗೆಯೊಂದು ವಿರಹಿಯೆಂದು ಕರೆ ಕರೆಯಲು ಹೊಂಚು ಹಾಕುತ್ತದೆ
ಮರ್ಕಟ ಮನಸ್ಸೊಂದು ಪುನಾಃ ಸೋಲಿಗೆ ಸೋಲುತ್ತದೆ

ನಿನ್ನ ಮಾತು ಕೇಳಿದಾಗೆಲ್ಲ
ಹೀಗೊಂದು ಹುಚ್ಚು ಖಾಲಿತನ ಹುಟ್ಟಿಕೊಳ್ಳುತ್ತದೆ .
ಮತ್ತೆ ಮತ್ತೆ ಹುಟ್ಟಲಾಗದ ನೋವಿಗೆ
ನವಿರಾಗಿ ಸ್ಪಂದಿಸುತ್ತದೆ ನನ್ನ ಸಾಲುಗಳು.

🌟 ಕಾವ್ಯ  ಜುಗಲ್ಬಂದಿ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕುವೆಂಪುರವರ ಕಲ್ಕಿ ಬಗೆಗೆ ಒಂದು ಅಭಿಪ್ರಾಯ

ಯಾರವನಲ್ಲಿ ದೂರದಲಿ... ಧಾವಿಸಿ ಬರುತಿಹ ಕ್ರೌರ್ಯದಲಿ... ಹಸಿವೆ....ದಾಹ....ರಕ್ತಾ..... ಇನ್ನೂ ಹಸಿವೆ    ಬಡವರ ಹೊಟ್ಟೆಯ ಬೆಂಕಿಯ ಹಸಿವೆ ಇನ್ನೂ ದಾಹ    ಬಡವರ ಗಂಟಲ ಬೇಗೆಯ ದಾಹ... ತುಂಬದೋ ಹೊಟ್ಟೆ ...         ಈ ಸಾಲುಗಳ...

ಮುಖವಾಡ

ಯಾವುದೋ ಊರಿನ ಸಂತೆ ನೆರೆದಿತ್ತು ಎಲ್ಲೆಡೆಯೂ ಗದ್ದಲ ಹಣ್ಣಿನಂಗಡಿ,  ತರಕಾರಿಯಂಗಡಿಗಳ ನಡುವಲ್ಲಿ ಜನರಿಂದ ಗಿಜಿಗುಡುವ ಒಂದು ಅಂಗಡಿ ಅದೇ ಮುಖವಾಡದಂಗಡಿ ಮುಖವಾಡ,  ಮುಖವಾಡ,  ತನ್ನತನವನೇ ಮರೆಯಿಸುವ ...

ಸಿಹಿ ನೆನಪಿನ ಸಂಚಿ

ನೀ ನನ್ನ ಸ್ವಂತ ಎಂಬ ಕನವರಿಕೆಯಲಿ ನೀನೀಗ ನನ್ನ ಜೊತೆಯಿಲ್ಲ ಎಂಬ ಕನಲಿಕೆಯೂ ಇದೆ ಈ ಕನಲಿಕೆ, ಕನವರಿಕೆಗಳ ನಡುವಲೂ ಒಂದು ಸಿಹಿಸುಖದ ಉಲುಹು ಇದೆ ಅದು ಸದಾ ನಿನ್ನನೇ ನೆನಪಿಸುತ್ತಿದೆ.