*ವನ ಸುಂದರಿ*
ವೈಶಿಷ್ಟ್ಯಗಳಿಗೆ ಮತ್ತೊಂದು ಹೆಸರು ಪ್ರಕೃತಿಯೆ ಇರಬೇಕು .
ಅದರಲ್ಲೂ ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಅನನ್ಯ ವನರಾಶಿಯು ತನ್ನ ಗರ್ಭದೊಳಗೆ ಅಡಗಿಸಿಕೊಂಡ ಜೀವವೈವಿಧ್ಯ ಅತ್ಯಪೂರ್ವ.
ಅದೇ ಸಾಲಿನಲಿ ನಿಲ್ಲುವುದು ಸಹ್ಯಾದ್ರಿಯ ಇಬ್ಬನಿ ಹುಲ್ಲು .
*ನಸುಕಲಿ ಹಿತ್ತಿಲ ಹುಲ್ಲಿನ ಮೇಲೆ ರಾಶಿರಾಶಿ ಮುತ್ತು* ಎಂಬ ಕವಿನುಡಿಗೆ ಸರಿಯಾಗಿ ಸುಂದರ ಹೂವೊಂದು ಇದೆ . ಅಚ್ಚ ನೀಲಿ ಒಂದಷ್ಟು ತಿಳಿ ನೇರಳೆ ಬಣ್ಣದ ಪುಟ್ಟಪುಟ್ಟ ಪಕಳೆಗಳನ್ನು ಹೊಂದಿರುವ ಈ ಗಿಡದಲಿ ಪಕಳೆಗಳ ಮೇಲೆ ವೆಲ್ವೆಟ್ ರೀತಿಯ ಕೂದಲುಗಳು ಇರುತ್ತವೆ . ಈ ಪಕಳೆಗಳ ತುದಿಗೆ ಪಾರದರ್ಶಕ ಎನಿಸುವ ಗುಳ್ಳೆಯ ರೀತಿಯ ರಚನೆಯೂ ಇರುತ್ತದೆ . ನೇರಳೆ ಬಟ್ಟೆಯ ಮೇಲೆ ಬಿಳಿ ಮುತ್ತಿನ ಕಸೂತಿ ಅಲಂಕಾರ ನೋಡಿದ ಹಾಗೆ ಭಾಸವಾಗುತ್ತದೆ .
ಕಡು ಹಳದಿ ಬಣ್ಣದ ಆರು ಕೇಸರಗಳನ್ನು ಹೊಂದಿರುತ್ತದೆ.
ನಯವಾದ ಕೂದಲಿನ ರಚನೆ ಹೊಂದಿರುವುದರಿಂದ ಇದನ್ನು ಬೆಕ್ಕಿನ ಕಿವಿ ಯ ಹೂ ಎಂದು ಕರೆಯುತ್ತಾರೆ.
*ಸೈಯಾನೋಟಿಸ್ ಟ್ಯುಬರೋಸ ಎಂದು ವೈಜ್ಞಾನಿಕವಾಗಿ ಕರೆಸಿಕೊಳ್ಳುವ ಈ ಹೂವನ್ನು ಆಸ್ಟ್ರಿಯಾ ದೇಶದ ಸಸ್ಯಶಾಸ್ತ್ರಜ್ಞ
ಜೂಲಿಯಸ್ ಹರ್ಮನ್ ಶಲ್ಟ್ ಸಹ್ಯಾದ್ರಿಯ ತಪ್ಪಲಲಿ ಕಂಡು ಹಿಡಿದಿದ್ದಾನೆ . ಹಾಗಾಗಿ , ಸಯಾನೋಟಿಸ್ ಸಹ್ಯಾದ್ರಿಕಾ ಎಂದು ಕರೆಯುತ್ತಾರೆ .
Commilineceae ( ಕಾಮಿಲಿನೇಸಿ ) ಕುಟುಂಬಕ್ಕೆ ಸೇರುವ ಈ ಹೂವು ,ಏಕದಳ ಸಸ್ಯವಾಗಿದ್ದು , commilinales ಕಾಮಿಲಿನೇಲ್ ವರ್ಗಕ್ಕೆ ಸೇರುತ್ತದೆ.
ಮರಾಠಿಯಲ್ಲಿ ಅಭಾಳಿ ಎಂದೂ , ತಮಿಳಿನಲ್ಲಿ ವಾಲುಕೈಕಿಜಂಗೂ ಎಂದು , ಕನ್ನಡದಲ್ಲಿ ಕನ್ನೆ ಹೂ ಎನ್ನುತ್ತಾರೆ .
ಇದು ದಪ್ಪದಾದ , ಮಡಚಿಕೊಂಡಂತ ಎಲೆಗಳನ್ನು ಹೊಂದಿರುತ್ತದೆ . 15-90cm ನಷ್ಟು ಉದ್ದಕ್ಕೆ ಬೆಳೆಯುತ್ತದೆ. ಹೂವು ಸೈಮ್ ರೀತಿಯ ಗೊಂಚಲಲ್ಲಿ ಹೂ ಬಿಡುತ್ತದೆ. ಈ ಹೂವಿಗೆ ತೊಟ್ಟು ಇರುವುದಿಲ್ಲ , ನೇರವಾಗಿ ಕಾಂಡದಿಂದಲೇ ಬೆಳೆದಿರುತ್ತದೆ. . ಈ ಹೂವಿನಲ್ಲಿ ಮಕರಂದ ಇರುವುದಿಲ್ಲ . ಆದರೂ
ಆಕರ್ಷಕ ಬಣ್ಣ , ಚಹರೆಯಿಂದ ಗಮನ ಸೆಳೆಯುತ್ತದೆ ಈ ಪುಟ್ಟ ಹೂ .
ಮೇ ಅಂತ್ಯ , ಒಮ್ಮೊಮ್ಮೆ ಆಗಸ್ಟ್ ನಿಂದ ಸೆಪ್ಟೆಂಬರ್ ವರೆಗೆ ಹೂ ಬಿಡುವ ಕಾಲ . ತುಂಬ ಅಪರೂಪದ ಹೂವು ಆದರೂ ನಮ್ಮ ಹಿರಿಯರಿಗೆ ಇದರ ಹಲವು ಉಪಯೋಗಗಳು ಗೊತ್ತಿದ್ದವು. ಡಯಾಬಿಟಿಸ್ ಹಾಗು ಕೆಮ್ಮು ,ಅಸ್ತಮಕ್ಕೆ ಔಷಧಿಯಾಗಿ ಈ ಹೂವನ್ನು ಬಳಸುತ್ತಿದ್ದರು.
ಇದು ಪಶ್ಚಿಮ ಘಟ್ಟಗಳಲ್ಲಿ ಕಂಡು ಬರುವ ಅಳಿವಿನಂಚಿಗೆ ಬಂದಿರುವ ಸಸ್ಯ . ಅಕೇಶಿಯಾ , ನೀಲಗಿರಿ ನೆಡುತೋಪುಗಳಿಂದ , ಹೆಚ್ಚುತ್ತಿರುವ ಕಾಫೀ ಪ್ಲಾಂಟೇಷನ್ ಗಳಿಂದ ಇದರ ಮೂಲ ಆವಾಸಕ್ಕೆ ಧಕ್ಕೆ ಬಂದು ಅಳಿವಿನ ಹಾದಿ ಹಿಡಿದಿದೆ.
ಕರ್ನಾಟಕ , ತಮಿಳುನಾಡು , ಒರಿಸ್ಸಾ , ಮಹಾರಾಷ್ಟ್ರದ ಕೆಲ ಭಾಗಗಳು , ಪೂರ್ವ ಹಿಮಾಲಯದಲ್ಲಿ ಈ ಹೂವು ಕಂಡು ಬರುತ್ತಿದೆ . ಅಪರೂಪದ ಈ ಹೂವನು ನೋಡಿದವರೂ ಬಹಳ ಕಮ್ಮಿ .
ನಿಸರ್ಗ ನಮಗೆ ನೀಡಿರುವ ಇಂತಹ ಸುಂದರ ಉಡುಗೊರೆಗಳನ್ನು ನಾವು ಕಳೆದುಕೊಳ್ಳುತ್ತಿರುವುದು ನಿಜಕ್ಕೂ ದುರಂತ . ನೋಡಿದ ತಕ್ಷಣ ವಾಹ್ ..ಎನಿಸುವ ಈ ಚೆಲುವೆಯ ನೋಡಿದ ಮೇಲೆ ಅವಳನ್ನು ಹುಡುಕದೇ ಇರಲಾಗಲಿಲ್ಲ .
ಬರಹ : ಕಾವ್ಯ ಎಸ್ ಕೋಳಿವಾಡ್
ಚಿತ್ರ : ವಿನೋದ್ ಕುಮಾರ್ ಸರ್
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ