ಜುಗಲ್ಬಂದಿ
ಹಣತೆ ಹಚ್ಚಿಟ್ಟ ಮಾಗಿ ಚಳಿಗೂ
ಬೆಚ್ಚಗಿನ ನೆನಪು ಕುಹುಕವಾಡುತ್ತದೆ
ವಿನಾಕಾರಣ ಖ್ಯಾತೆ ತೆಗಿಯುವ
ಮಂದಹಾಸ ಕವಲೊಡೆಯುವುದೇ ಆಗ
ಮುದ್ದು ಸುರಿವ ಅವನ ಕನವರಿಕೆ ಶುರುವಾದಾಗ ಶೀತಲ ಗಾಳಿ ಯೂ ಬೆಚ್ಚಗಿನ ಭಾಷ್ಯೆ ಬರೆಯುತ್ತದೆ .
ನನ್ನೊಳಗಿನ ಹೆಣ್ಣು ಒಮ್ಮೊಮ್ಮೆ ಹೊರಬರೋದು ಆಗಲೇನೇ
ಮಾತಿನಲ್ಲೇ ಮಧುಶಾಲೆ ಕಟ್ಟುತ್ತಾಳೆ
ಅಮಲೆಂದರೆ ನುಡಿಗಳೋ ಅದೆಂತೋ
ಈಗೆಲ್ಲಾ ಚುಕ್ಕಿ ಹೊಳೆಯುವ ರಾತ್ರಿಗೆ ನೆನಪ ಕಿಚ್ಚು ಹಚ್ಚೋದೇ ಅವಳ ಹೆಣ್ತನ
ಅವನ ಹುರಿಮೀಸೆಯ ಮರೆಯಲ್ಲಿ ಮುಗುಳುನಗುವೊಂದನ್ನು ಬಚ್ಚಿಟ್ಟಿದ್ದಾಳೆ . ಕಿರುಮಚ್ಚೆ ಛೇಡಿಸಿದ್ದು ಅವಳನ್ನೇನಾ ? ಅನ್ನೋದು ಇನ್ನೂ ಸಿಹಿಯಾದ ಗೋಜಲು
ಕನಸಿನಂಗಳದಲ್ಲಿ ಮುಸುಕೆಳೆದು ಕೂತಾಗ ಬಂದು ನೇವರಿಸುವ ಮನಸು ಅವನದು , ಮುರಿದ ರೆಕ್ಕೆಯ ತೆಕ್ಕೆಗಾನಿಸಿ ಜೀವದೊಲುಮೆಯ ತುಂಬಿ ಗರಿಯ ತುಂಬ ಕಣ್ಣ ಕಾವ್ಯ ..
ಕಣ್ಣ ಕವಿತೆಗಳೆಲ್ಲ ಇತ್ಯರ್ಥವಾಗೋದು ನಿರ್ದಯಿ ರಾತ್ರಿಗೆ
ಅನೂಹ್ಯ ತೆಕ್ಕೆಯೊಳಗೆ ಬಂಧಿಯಾಗಬೇಕೆನ್ನುವ ಯಕಚ್ಚಿತ್ ಬಯಕೆ ಹುಟ್ಟು ಪಡೆಯುವುದೇ ಸೋಜಿಗ ನನ್ನಲ್ಲಿ
ಮತ್ತ ಭ್ರಮರಿಯ ಹಾಗೆ ಹೂವಿನ ಕುರುಹು ಹುಡುಕಿ
ಜೀವರಸವನರಸಿ ಪ್ರತಿ ಹನಿಯಲೂ ಒಸರಿ ಬಂದ ನೆನಹುಗಳು ರಾತ್ರಿಯಲಿ ಬಿಡಿಸಿಟ್ಟ ಘಮಲಲೂ ಅವನದೆ ಹೆಸರು
ಎಸಲಿನಲ್ಲೊಂದು ಚಿತ್ತಾರ ಬಿಡಿಸಿಟ್ಟ ತರುವಾಯ ಬಿಳಿಮೋಡಕ್ಕೇನೋ ಕಳೆ ಬಂದಂತೆ ಅವಳ ನೆನಹು
ಎದೆ ಜೋಪಡಿಗೆ ಎಣ್ಣೆ ಹಚ್ಚುತ್ತಾಳೆ ಸದ್ದಿಲ್ಲದೇ
ಈಗೆಲ್ಲ ಅಡಾವುಡಿ ಮಾತಿಗೂ
ತುಟಿಕಚ್ಚಿ ಪೋಲಿ ಎನಿಸಕೊಳ್ಳಬೇಕೆಂಬ ಇರಾದೆ
ನಿನ್ನ ನೆನಹಿನ ರಾತ್ರಿಗಳಲಿ ಸಾವಕಾಶದಿ ಉರಿದ ಕನಸುಗಳ ಉಸಿರ ಬಿಸಿ ಇನ್ನೂ ನನ್ನ ಬೆಚ್ಚಗಿಟ್ಟಿದೆ . ಎದೆಯ ಜೋಪಡಿಯಲ್ಲೀಗ ಒಂಟಿ ಹಕ್ಕಿಯ ಹಾಡು
ಸೀರೆ ಸೆರಗಲ್ಲಿ ಕೌತುಕ ಗಂಟಿಕ್ಕಿದ್ದಾಳೆ ಯಾಕೋ ಕಾಣೆ
ಜ್ವಲಂತ ನೆನಪಿಗೂ ಆಸೆಯ ಪನ್ನೀರಿತ್ತು ಮೊಹಬತ್ತಿನ ರುಜುವಾತು ಮಾಡುತ್ತಾಳೆ
ಒಂಟಿ ಹಾಡಿಗೆ ಧ್ವನಿ ಕೊಡಲು
ಕೊಂಟಕಟ್ಟುವ ಬೇನಾಮಿ ನೆಪ
ಯಮುನೆಯ ತಟದ ಮರಳ ಕಣವೂ ಕಾದಿದೆ ಗೊಲ್ಲನ ಸವಿಯುಲಿಗೆ , ದೀಪವುರಿಸಿ ಕೂತ ಸಖಿಯ ಬಿಕ್ಕಳಿಕೆಗೆ ಗೋಕುಲವು ನಿರುತ್ತರಿ
#ಕಾವ್ಯ_ಜುಗಲ್ಬಂದಿ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ