ಗುಂಡು ಸಿಡಿವ ಬಂದೂಕಿನಲಿ ಪಾರಿವಳ ಗೂಡು ಕಟ್ಟಬಾರದೇ ಎಂದು ಸೈನಿಕನ ಮುದ್ದು ಮಗು ಪ್ರಾರ್ಥಿಸಿತ್ತು
ಪುಟ್ಟ ಕಂಗಳಿಂದ ಉದುರಿದ ಹನಿ ತಂಗಾಳಿಯನೂ ಬಿಸಿಯಾಗಿಸಿತ್ತು .
ಇರಿದ ಚೂರಿಯ ಮೇಲಿನ ರಕ್ತದ ಕಲೆಯಲಿ ಬುದ್ದನ ನಗುವಿತ್ತು. ಅಳಿಸಿದ ಪುಟ್ಟ ವಿಧವೆಯ ಕುಂಕುಮದಂತೆ ಬಿಳಿಯ ರೆಕ್ಕೆಗಳೂ ಈಗ ಕೆಂಪು ಕೆಂಪು
ಮುಗಿಲಲಿ ಮಲಗಿದ್ದ ಚಂದಿರನ ಮೌನ ಮುಗುಳು
ಹಾಲು ಗಲ್ಲದ ಕಂದನ ಅಳು ಇಮ್ಮಡಿಸಿತ್ತು.
ತೋಳಜೋಲಿಯಲಿ ತೂಗಿ ಮಲಗಿಸುತಿದ್ದ
ಅಪ್ಪನಿಗೀಗ ಕೈಗಳಿಲ್ಲ
ಬುದ್ಧನ ನಗುವಿಗೂ ಈಗೀಗ ಮೆತ್ತಿದಂತಿದೆ
ಸಾವಿನ ಕಮಟು...
ಜಂಗುಳಿಯೊಳಗೆ ಅಮ್ಮ ಸಿಕ್ಕದೆ
ಅಲೆದಾಡಿದ ಮಗು
ರಕ್ತ ಸಿಕ್ತ ದೇಹ ಚೆಲ್ಲಾಪಿಲ್ಲಿ ದೇಹಗಳ
ನೋಡಿ ಬೆಚ್ಚಿ ಬಿದ್ದಿದೆ
ಎಲ್ಲಿಯದೋ ಅಳು ಅದು ಉಗ್ರನ
ಎದೆಯೊಳಗಿನ ಸತ್ತ ಮಾನವೀಯತೆಯದು
ಅಂತ ಅದಕಿನ್ನು ಗೊತ್ತಿಲ್ಲ
ಪೈನ್ ಮರದ ಎಲೆ ಕಚ್ಚಿಕೊಂಡು ಹಾರುತಿರುವ ಹಕ್ಕಿಯಾದರೂ ಉಳಿಸಬಹುದಿತ್ತೆಂದು
ಸಹಸ್ರ ಆಯ್ಲಾನ್ ರು ಮುಗ್ಧವಾಗಿ ಬೆದರಿದ
ಕಣ್ಣಿಂದ ನೋಡುತ್ತಲೇ ಇದ್ದಾರೆ
ಕಟುಕ ಸಮುದ್ರ ಅವರನ್ನ ಮತ್ತೆ ಮತ್ತೆ
ದಡಕೆ ತಂದು ಹಾಕುತ್ತಲೇ ಇದೆ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ