ಇಲ್ಲಿ ,
ಅಪ್ಪನ ಮಡಿಲಲಿ
ಬುದ್ಧನ ನಗುವನೂ ಮೀರಿಸುತ್ತಾ
ಮೂರುತಿಂಗಳ ಮಗಳು
ಸುಖ ನಿದ್ದೆಯಲಿದ್ದಾಳೆ ...
ಮುಗ್ಧ ಮಗಳ ಮುಗುಳು ನಗು
ಅಪ್ಪನನ್ನೂ ಬೆಚ್ಚಗಿಟ್ಟಿದೆ...
ಅಲ್ಲಿ ,
ಅಪ್ಪನ ಮುಖವನೇ ನೋಡದ ಹುಡುಗಿಯ ಕಣ್ಣಲೂ ಮುಗಿಯದ ಕಾತರಿಕೆ .ಬೇಕು ಅನಿಸಿತಿದೆ ಸುರಕ್ಷ ಭಾವ..
ಕ್ರೂರಿ ಸಮಾಜದ ರಣ ಹಸಿವಿಗೆ ಬಲಿಯಾಗಿ ,ಕಾಲನ ಕೈಯಲಿ ಸಿಲುಕಿ ,ನಲುಗಿ.. ಬೋರ್ಡು ತಗುಲಿಸಿಕೊಂಡು ಮಲಗಿದ್ದಾಳೆ ಈ ಹನ್ನೆರಡರ ಹುಡುಗಿ
" FRESH NO HIV"
ಅವಳ ಯಾವ ನಿಟ್ಟುಸಿರಿಗೂ , ಅವಳ ಕನಲಿಕೆಗಳಿಗೂ ಬೆಲೆಯಿಲ್ಲ... ಕೇಳಿಸಿಕೊಳ್ಳುವ ತಾಳ್ಮೆ ಯಾರಿಗೂ ಇಲ್ಲ..
ಬಡತನದ ಬೆಂಕಿಯೊಳು ಕರಗುತಿರುವ ಬಾಲೆ ಅವಳು
ಬೇಯುತಿಲ್ಲ..
ಕನಸುಗಳಿಗೆ ರೆಕ್ಕೆ ಮೂಡುವ ಮುನ್ನ ಆಗುತಿದೆ ಗರ್ಭಪಾತ..
ಬಡತನ ಹಚ್ಚಿದ ಈ ಬೆಂಕಿಯೊಳಗೆ
ಸುಟ್ಟು ಕರಕಲಾಗಿದೆ ಬಾಲ್ಯ
ಜರೀ ಲಂಗದ ಆಸೆ .
ಬಣ್ಣದ ಬಲೂನು ಹಿಡಿದು ಜಾತ್ರೆ ತಿರುಗುವ ಬಯಕೆ ..
ತಮ್ಮನೊಂದಿಗೆ ಆಡಬೇಕಿದ್ದ ಜಾರುಬಂಡೆ .. ಹೀಗೆ..
ಎಳೆಗರುವಿನ ಮೇಲೆ ಏರಿಬಂದ ರಾಕ್ಷಸರ ಮೃಗೀಯ ವರ್ತನೆಯ
ಅವುಡುಗಚ್ಚಿ ಸಹಿಸುತ್ತಿದ್ದಾಳೆ ಹುಡುಗಿ.ನೋವು ನೀಡುತಿದೆ
ಮನಸಿನ ಗಾಯ
ಬಿಗಿದ ಸಂಕೋಲೆಯೊಳಗೆ
ಎಲ್ಲವನೂ ಮೀರಿದ ಮೌನ
ನಿಶ್ಚಲ ಕಂಗಳಿಂದ
ಶೂನ್ಯದೆಡೆಗಿನ ನೋಟ ತಿವಿಯುತಿದೆ ಸಮಾಜವನ್ನು..
ಅಮ್ಮನ ಬಳಿ ಕೇಳುತ್ತಾಳೆ ನನಗೇಕೆ ಹೀಗೆ ??
ಅಮ್ಮ ನಿರುತ್ತರಿ ..
ಬಹುಷಃ ಅಮ್ಮನಷ್ಟೇ ಅಲ್ಲ
ಆತ್ಮ ಸಾಕ್ಷಿ ಉಳ್ಳ ಯಾರೂ......
ಏನಾದರೂ ಬುದ್ಧ ಮಾತ್ರ ನಗುತ್ತಲೇ ಇದ್ದಾನೆ
⭐ ಕಾವ್ಯ ಎಸ್ ಕೋಳಿವಾಡ್
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ