"ಅವನಿಗಷ್ಟೇ ಕೇಳಿಸಬೇಕಾದ ಮಾತು "
ಸಾಗರದ ಅಲೆಯ ಕಪ್ಪೆಚಿಪ್ಪಿನ ಮೇಲೆ ಮೀನ ಹೆಜ್ಜೆ ಹುಡುಕುವ ಹುಡುಗಾ ...
ಕ್ಯಾಡ್ಬರಿಯ ಕೋಮಲತೆ ನಿನ್ನ ಪ್ರತಿ ನಗೆಯೊಳಗೂ
ನನ್ನ ನೆನಪಿನ ಡಬ್ಬಿಯ ಸ್ವೀಟ್ ಮಿಲ್ಕೀ ಬಾರ್ ...
ಹನಿ ಮಳೆಯ ಜರೀಲಂಗ ತೊಟ್ಟ ಪುಟ್ಟ ಕನಸಿಗೆ
ಗಂಟೆ ಒಂದಾದರೂ ಮುಗಿಯದ ಮಾತಿಗೆ
ಗಿರ್ರನೆ ತಿರುಗಿ ಕಮಲದಂತೆ ಕೂರುವ ಮುದ್ದು ಹುಡುಗಿಯ ಗೆಜ್ಜೆ ಸದ್ದನೇ ಎತ್ತಿಡುತ್ತೇನೆ
ನನ್ನ ಎದೆಯ ಕತ್ತಲೊಳಗಿನ
ಶೂನ್ಯ ಭಾವ ನೀನೇ
ಉರಿಯ ಕೂಸಿಗೆ ತಣ್ನೆಳಲ ಜೋಗುಳ
ನೀನು ,
ಬಯಲಿನ ಬೆಳಕಿಗೆ ಅಂಚಿಲ್ಲ ನೋಡು , ಜಗದಗಲ ಬೆಳಕಿಗೆ ಬೊಗಸೆಯ ಸೀಮಿತ ..
ನಿನ್ನ ಕನ್ನಡಕದ ಕಣ್ಣೊಳಗೆ
ಮುಗಿಯದಿರುವ ಕೋಟಿ ಕನಸುಗಳಿಗೆ ಜೊತೆಯಾಗಿ ಬೆಚ್ಚಿಬಿದ್ದ ನಾನು ಮತ್ತು ಹೀಗೆ ಒಂದಷ್ಟು ಅಬ್ಬೇಪಾರಿ ಪುಳಕಗಳು . ತಿಳಿಗತ್ತಲ ಸಂಜೆಯಲಿ ನೆನಪಾದ ತಾನಗಳು
ಮನದ ಪಿಸುಮಾತನು ಅರ್ಥ ಮಾಡಿಸಲು ಈಗ ಮೌನಕೆ ಗಂಟು ಬಿದ್ದಿದ್ದೇನೆ
ಗಡ್ಡದ ನಡುವೆ ಗುಳಿಕೆನ್ನೆ ನಕ್ಕ ಹಾಗೆ ಮಾತಿನೊಡನೆ ಈ ಮೌನದ ಅನುರಣನ
ಕೊನೆಗೂ ಭಾವಗಳ ಜಡೆ ಹೆಣೆಯುತ್ತಾ ಕಾಲವನ್ನ ಪೋಣಿಸಲು ಕುಳಿತಿದ್ದೇನೆ ಗಂಟೆ ಮೂರಾದರೂ ಮುಗಿಯದ ಮಾತಿಗೆ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ