ಮೂಲ : ಕೀಶ್ವರ್ ನಯೀದ್
ಪಾಕಿಸ್ತಾನದ ಕವಯಿತ್ರಿ
ಪದ್ಯ : I am not that woman
ನಾನು ಅವಳಲ್ಲ .
ನಾನು ಆ ಹೆಣ್ಣಲ್ಲ .
ನಿನಗೆ ಸಾಕ್ಸ್ ಶೂ ಮಾರುವ ಅವಳಲ್ಲ .
ನೆನಪಿಸಿಕೊ ನನ್ನ , ನಾನು ಅವಳೇ
ನೀನು ತಂಗಾಳಿಯಂತೆ ಸ್ವಚ್ಛಂದ ವಿಹರಿಸುವಾಗ ನಿನ್ನ ಕಲ್ಲಿನ ಗೋಡೆಗಳ ಮಧ್ಯೆ ಅಡಗಿಸಲ್ಪಟ್ಟವಳು
ನಿನಗಿನ್ನೂ ತಿಳಿದಿಲ್ಲ , ನನ್ನ ಅಸ್ಮಿತೆಯ ದನಿಯನ್ನು ನಿನ್ನ ಕಲ್ಲಿನ ಗೋಡೆ ಅಡಗಿಸಿಡಲಾಗದೆಂದು
ನಾನು ಅವಳೇ , ನಿನ್ನ ಸಂಪ್ರದಾಯದ ಕಟ್ಟಳೆಯ ಭಾರದಿಂದ ನಜ್ಜುಗುಜ್ಜಾದವಳು
ನಿನಗಿನ್ನೂ ತಿಳಿದಿಲ್ಲ
ಬೆಳಕನ್ನು ಕತ್ತಲೊಳಗೆ ಬಂಧಿಸಲಾಗದೆಂದು .
ನೆನಪಿಸಿಕೋ ನನ್ನ ,
ಯಾರ ಮಡಿಲಿಂದ ಹೂವ ಕಿತ್ತು , ಮುಳ್ಳು ಬಿತ್ತಿದೀಯೋ ನಾನು ಅವಳೇ ನಿನಗಿನ್ನು ತಿಳಿದಿಲ್ಲ ,
ನಿನ್ನ ಸರಪಳಿಗಳು ನನ್ನೊಳಗಿನ ಘಮಲನ್ನು ಬಚ್ಚಿಡಲಾರವು ಎಂದು.
ಪಾತಿವ್ರತ್ಯದ ಹೆಸರಲಿ ತನ್ನದಾಗಿಸಿಕೊಂಡೆಯೋ , ನಾನು ಅವಳೇ , ನಿನಗಿನ್ನೂ ತಿಳಿದಿಲ್ಲ ಮುಳುಗುತ್ತಿರುವಾಗ ನೀರ ಮೇಲಿನ ನಡಿಗೆಯನ್ನೂ ನಾ ಬಲ್ಲೆನೆಂದು
ನಾನು ಅವಳೇ , ನಿನ್ನ ಕಷ್ಟಕೆ ಆಸರೆಯಾಗಿ ಬದುಕ ನೀಡಿದವಳು
ಆದರೂ ನಿನಗೆ ತಿಳಿದಿಲ್ಲ ,
ಸೀಮಿತ ,ಬಂಧಿತ ಮನಸುಗಳಿರುವ ದೇಶ ಎಂದಿಗೂ ಸ್ವತಂತ್ರವಾಗಲಾರದೆಂದು
ನಾನು ಅವಳೇ , ಮಕ್ಕಳನು ಹೆರುವ ಯಂತ್ರವಾಗಿ , ಶೀಲಕ್ಕಾಗಿ , ನನ್ನ ಸ್ವಾಮಿನಿಷ್ಟೆಗಾಗಿ ಕೊಳ್ಳಲ್ಪಟ್ಟವಳು
ಇದು ಸಕಾಲ , ಸ್ವಚ್ಛಂದವಾಗಿ ಅರಳಲು , ಪರಿಧಿಯೇ ಇಲ್ಲದಂತೆ ರೆಕ್ಕೆ ಬಿಚ್ಚಿ ಹಾರಲು ,
ನಾನು ಆ ಪೋಸ್ಟರಿನ ಅರೆಬೆತ್ತಲೆ ಹೆಣ್ಣಲ್ಲ .
ನಾನು ಅವಳಲ್ಲ .
ಕಾವ್ಯ ಎಸ್ ಕೋಳಿವಾಡ್
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ