================
ಅಂದು ಸುರಿದಿತ್ತು ಮಳೆ.. ರಚ್ಚೆ ಹಿಡಿದ ಮಗುವಿನಂತಲ್ಲ..
ಮಗುವಿನ ಸ್ನಿಗ್ಧ ನಗುವಿನಂತೆ.
ಮಗುಮನದ ಹೃದಯದಲಿ
ಭಾವನೆಗಳ ಹದವರಿತು ಸುರಿಯುವ ಸೆಲೆ...
ಮೊದಲ ಮಳೆಹನಿ ಬಿದ್ದು ಪುಳಕಗೊಂಡ ಭೂಮಿಯ ನೋಡಿ
ಪ್ರಕೃತಿಯ ಎಳೆಗೆನ್ನೆಯ ಮೇಲೆ ಎಂದೂ ಕಾಣದ ನವಿರುಗೆಂಪು.
ಕಾರಣವಿಲ್ಲದೆ ಅವಳ ಕೆನ್ನೆಯೂ....
ಮಳೆಯನ್ನು ಆಸ್ವಾದಿಸುತ್ತಾ ಕುಳಿತ ಆ ಪುಟ್ಟ ಮನಸಿನಲ್ಲೂ ಅಂದು ಭಾವನೆಗಳ ಸೋನೆ ಮಳೆ..
ಮುಗ್ಧತೆಗೂ, ಪ್ರಬುದ್ಧತೆಗೂ ತೂಗುಯ್ಯಾಲೆ ಆಡುವ ವಯಸು.
ಮುಗ್ಧತೆಯ ಪರದೆ ಸರಿಸದೇ ಪ್ರೌಢತೆಯ ನೆರಳು ಚೂರು ಚೂರೇ ಬೀಳುತ್ತಿರುವ ಮನಸದು.
ಅವಳು ಸ್ವಭಾವತಃ ಮೌನಿ. ಯಾರೊಡನೆಯೂ ಹೇಳಿಕೊಳ್ಳದೇ ಇರುವ ಅದೆಷ್ಟೋ ಮಾತುಗಳನ್ನು ಹಂಚಿಕೊಳ್ಳುವ ಸಂಗಾತಿ ಅಂದ್ರೆ ಮಳೆ. ಅದೂ ಮೌನವಾಗಿಯೇ...
ಕಳೆದುಕೊಂಡ ಅವಕಾಶವನ್ನು , ನನಸಾಗದ ಕನಸುಗಳನ್ನು ,
ಮುಗ್ಧ ಮನದ ಹಂಬಲಗಳನ್ನು, ಒಂಟಿತನದ ಬೇಜಾರನ್ನು , ಹೀಗೇ ಎಲ್ಲವನ್ನೂ ಮಳೆಯೊಂದಿಗೆ ಮೌನ ಸಂವಹನ ನಡೆಸುತ್ತಾಳೆ.
ತನ್ನ ಬೊಗಸೆ ಕಂಗಳ ಮೂಲಕ.
ಎಲ್ಲವನ್ನೂ ಭಾವುಕತೆಯ ಪರಿಧಿಯೊಳಗೆ ನೋಡುವ ಅವಳಿಗೆ ...be practical ...
ಅಂತಾ ಒಳಮನಸು ಆಗಾಗ ಎಚ್ಚರಿಸುತ್ತಾ ಇರುತ್ತದೆ..
ಆ ನಿರ್ಭಾವುಕ, ಪ್ರಾಯೋಗಿಕ ಮನಸ್ಥಿತಿಗಳೆಂಬ ಬರಡಿಗಿಂತ,
ಭಾವ ಲಹರಿಗಳ ಜಡಿಮಳೆಯೇ ಇಷ್ಟ..
ಒಮ್ಮೆ ಹೋಗಿ ಆ ಸುರಿಯುತ್ತಿರುವ ಮಳೆಯಲ್ಲಿ ಮನಬಿಚ್ಚಿ ಕುಣಿಯುವ ಮನಸಾಗುತ್ತೆ ... ಅದರ ಬೆನ್ನಲ್ಲೇ ನಾಚಿಕೆ..
ಇದೇ ಮಳೆಯಲ್ಲಿ ಬೆರಳ ಹಿಡಿದು ನಡೆಯಲು ಅವನಿಲ್ಲ ಅನ್ನೋ ಕಟು ವಾಸ್ತವ ಅವಳ ಮನಸನ್ನ ಚುಚ್ಚುತ್ತೆ...
ಹೊರಗೆ ಬೀಳುವ ಮಳೆಯನ್ನು ಕಿಟಕಿಯ ಮೂಲಕ ನೋಡುತ್ತಾ ನಿಂತವಳಿಗೆ ತನಗರಿವಿಲ್ಲದೇ
ಕಣ್ಣಹನಿಗಳು ಕೆನ್ನೆಯನ್ನು ತೋಯಿಸಿರುತ್ತೆ.
ಮಳೆ ಹೊರಗೆ ನಿಲ್ಲುವಂತಿದ್ದರೂ ಸಹ ಮನದೊಳಗೆ ನೆನಪುಗಳು ಮೊಡ ಕಟ್ಟಿ ನಿಂತಿರುತ್ತವೆ.
" ಎಲ್ಲ ಮರೆತಿರುವಾಗ ಇಲ್ಲ ಸಲ್ಲದ ನೆಪವ ಹೂಡಿ ಬರದಿರು ಮತ್ತೆ ಮಧುರ ನೆನಪೇ.." ಅಂತಾ ತನ್ನಲ್ಲೇ ಗುನುಗಿಕೊಳ್ತಾಳೆ.
ಮಳೆ ನಿಂತ ಮೇಲೆ ಸೂಸಿ ಬಂದ ತಂಗಾಳಿ ಅವಳ ಮನಸಿಗೆ ಸಾಂತ್ವನ ನೀಡುತ್ತೆ.
ಆ ತಂಗಾಳಿ ಹೊತ್ತು ತಂದ ಸುಗಂಧ
ಅವಳನ್ನು ಯಾವುದೋ ಸುಪ್ತವಾದ ತೀರಕ್ಕೆ ಎಳೆದೊಯ್ಯುತ್ತೆ...
ಅವಳೂ ರಾಧೆಯಾಗ್ತಾಳೆ.
ಬರದಿರುವ ಮೋಹನನ ನೆನಪಲ್ಲಿ..... ಆ ಮುರಳೀ ಗಾನದ ಗುಂಗಿನಲ್ಲಿಯೇ ತನ್ನನು ತಾನು ಮರೆಯುತ್ತಾಳೆ.....
================
* ಕಾವ್ಯ ಎಸ್ ಕೋಳಿವಾಡ್
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ