ವಿಷಯಕ್ಕೆ ಹೋಗಿ

ಕುವೆಂಪುರವರ ಕಲ್ಕಿ ಬಗೆಗೆ ಒಂದು ಅಭಿಪ್ರಾಯ

ಯಾರವನಲ್ಲಿ ದೂರದಲಿ...
ಧಾವಿಸಿ ಬರುತಿಹ ಕ್ರೌರ್ಯದಲಿ...
ಹಸಿವೆ....ದಾಹ....ರಕ್ತಾ.....
ಇನ್ನೂ ಹಸಿವೆ
   ಬಡವರ ಹೊಟ್ಟೆಯ ಬೆಂಕಿಯ ಹಸಿವೆ
ಇನ್ನೂ ದಾಹ
   ಬಡವರ ಗಂಟಲ ಬೇಗೆಯ ದಾಹ...
ತುಂಬದೋ ಹೊಟ್ಟೆ ...

        ಈ ಸಾಲುಗಳನ್ನು ಕೇಳಿದಾಗಲೆಲ್ಲಾ... ಒಂದು ಮುಗುಳುನಗು ನಂಗೇ ಗೊತ್ತಿಲ್ಲದೆ ಮಿಂಚಿ ಮಾಯವಾಗತ್ತೆ. ಕುವೆಂಪು ವಿಶ್ವವಿದ್ಯಾನಿಲಯದ ಸಹ್ಯಾದ್ರಿ ಉತ್ಸವದಲಿ ನಾವು ಕುವೆಂಪುರ ಕಲ್ಕಿಯನ್ನು ರಂಗರೂಪಕ್ಕೆ ತಂದಿದ್ವಿ .ಅದರಲ್ಲಿ ನಾನೇ ಕಲ್ಕಿಯಾಗಿದ್ದೆ. ಯಾರು ಈ ಕಲ್ಕಿ ಅಂತಾ ಈ ದೀರ್ಘ ಪದ್ಯ ಓದಿದಾಗ ಕಲ್ಕಿಯ ಆಳ, ಹರವು, ವಿಸ್ತಾರದ ಅರ್ಥ ತಿಳೀತಾ ಹೋಯ್ತು
ಅದನ್ನು ಅಕ್ಷರ ರೂಪಕ್ಕೆ ಇಳಿಸುವ ಪುಟ್ಟ ಪ್ರಯತ್ನ ...
        
ಕಲ್ಕಿ ಒಂದು ದೃಶ್ಯಕಾವ್ಯ.ಕುವೆಂಪುರವರು ೩೦ ರ ದಶಕದಲ್ಲಿ ಬರೆದ ದೀರ್ಘ ಪದ್ಯ.
ಕವಿ ಕನಸಿನಲ್ಲಿ ಒಂದು ದಿನ ಕಾಡಿನ ಮಧ್ಯೆ ಬೆಟ್ಟದ ಮೇಲಿನ ಊರಿಗೆ ಹೋಗುತ್ತಾರೆ.ಅಲ್ಲಿ ಬಡವರ ಶ್ರೀಮಂತರ ನಡುವಿನ ಅಸಮಾನತೆಯನ್ನು ಕಾಣುತ್ತಾರೆ. ಉಳ್ಳವರ ದರ್ಪ,ಅಹಂಕಾರದ ಜೊತೆಯಲ್ಲಿಯೇ ಬಡವರ ಆರ್ತನಾದದ, ದೀನ ಸ್ಥಿತಿಯ ಕರಾಳ ದರ್ಶನ ಮಾಡಿಸುತ್ತಾರೆ.

ನೋಡನೋಡುತ್ತಿದ್ದಂತೇ,ಬಡವರ ಜಠರಾಗ್ನಿಯು ಎದ್ದು ಬಡವ ಬಲ್ಲಿದರೆನ್ನದೇ ಎಲ್ಲರನೂ ನುಂಗಿ ನೊಣೆಯುತ್ತದೆ.ಬಡವರ ಹೊಟ್ಟೆಯ ಬೆಂಕಿಯೇ ಕಲಿಯುಗದ ಅಂತ್ಯದ ಕಲ್ಕಿಯಾಗಿ ಸರ್ವವನೂ ಆಪೋಷಣ ತೆಗೆದುಕೊಳ್ಳುವ ಭೀಕರ ಚಿತ್ರಣ ಇಲ್ಲಿದೆ.
ಇಲ್ಲಿ ಕಲ್ಕಿಯು ಕ್ರೌರ್ಯದ ಪ್ರತಿರೂಪ. ರಕ್ತದ ಜಲಪಾತದಲಿ , ಅಸ್ಥಿಪಂಜರದ ಅಶ್ವವನೇರಿ, ಬೆಳ್ಳಗೆ ಚಿಲಿಯುವ ದಾಡೆಯ ತೋರಿ , ಮಿಂಚಿನ ಕತ್ತಿಯನ್ನು ಸಿಡಿಲಿನ ಬುತ್ತಿಯನ್ನೂ ಹಿಡಿದು ಭೀಭತ್ಸ, ಆಕ್ರೋಷದ ಮೂರ್ತರೂಪವಾಗುತ್ತಾನೆ.ಅವನ ಬತ್ತದ ರಣಹಸಿವು,ರಣದಾಹ ಅಸಮಾನತೆಯನ್ನು ತಡೆಯುವವರೆಗೂ ನಿಲ್ಲಲಾರವು.

ಪಾಪದ ದೇಹ ,ಪುಣ್ಯದ ದೇಹ, ಗುಡಿಗೋಪುರಗಳೂ,ಧರ್ಮದ ಗೇಹ ಎಲ್ಲವೂ ಸಹ ಕೊಚ್ಚಿಹೋಗುತ್ತವೆ. ಕಲ್ಕಿ ಇಲ್ಲಿ ಪ್ರಳಯರೂಪಿಯಾಗಿ ಕಾಣಿಸುತ್ತಾನೆ.ಅಲ್ಲಿದ್ದ ಎಲ್ಲವನೂ ಸಂಹರಿಸಿದ ಮೇಲೂ ಅವನ ಹಸಿವೆ ,ದಾಹಗಳು ಇಂಗದೇ ಇದ್ದಾಗ ಕವಿಯ ಕಡೆಗೂ ಧಾವಿಸಿ ಬಂದಾಗ ಕಲ್ಕೀ ಎನ್ನುತಾ ಚೀರಿ ಕನಸೊಡೆದು ಎದ್ದು .."ಇನ್ನೆಲ್ಲಿಯ ನಿದ್ದೆ " ಎಂದು ಪ್ರಶ್ನಿಸುತ್ತಾರೆ. ಈ ಪ್ರಶ್ನೆ ಅಸಮಾನತೆಯ ಸಮಾಜಕ್ಕೆ ಹಾಕಿದ ಪ್ರಶ್ನೆಯಾಗಿದೆ.ನೆಮ್ಮದಿಯಿಂದ ನಿದ್ರಿಸುವ ಕಾಲ ಈಗಿಲ್ಲ ತೂಕಡಿಸದೇ ಎಚ್ಚರವಿರಲೇಬೇಕಾದ ಅನಿವಾರ್ಯತೆ ಇದೆ ಎನ್ನುತ್ತಾರೆ. ನನ್ನ ಪ್ರಕಾರ ಈ ಒಂದು ಸಾಲು ದೀರ್ಘ ಪದ್ಯಕ್ಕೆ ದಿಕ್ಸೂಚಿ.

ಕುವೆಂಪುರವರ ಕಲ್ಪನೆಯ ಕ್ರೂರ, ಭೀಕರ ಕಲ್ಕಿ ಬರದೇ ಇದ್ದರೂ ಅಸಮಾನತೆಯನ್ನು ತೊಡೆದುಹಾಕಲು ಪ್ರತಿಯೊಬ್ಬರ ಮನದಲ್ಲೂ ಒಬ್ಬೊಬ್ಬ ಸಮಾನತೆಯ ಕಲ್ಕಿ ಉದಯವಾಗಿ ತನ್ಮೂಲಕ
ವಿಶ್ವಮಾನವತೆಯ ಬಳಿಗೆ ಸಾಗುವಂತೆ ಆಶಿಸುತ್ತಾರೆ.
      
         ಒಟ್ಟಾರೆಯಾಗಿ ಕುವೆಂಪುರವರ ಈ ದೀರ್ಘ ಪದ್ಯವು,  ಕಣ್ಣಿಗೆ ಕಟ್ಟುವಂತೆ ಚಿತ್ರಿತಗೊಂಡು, ವರ್ಗ ಸಂಘರ್ಷಕ್ಕೆ ಹಚ್ಚಿದ ಕಿಚ್ಚಿನಂತಿದೆ.

ಕಾಮೆಂಟ್‌ಗಳು

  1. ಕುವಪು ರವರ e ಪದ್ಯ ದಲ್ಲಿ ಅಸಮಾನತೆ ಎದೆಗೆ ಕಲ್ಕಿ ಉಸಿರು ಬಿಡಬೇಕೆಂದು ಅದರ ನಿರ್ನಾಮ ವಗಬೆಂದು ಹೇಳಿದ್ದಾರೆ

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮುಖವಾಡ

ಯಾವುದೋ ಊರಿನ ಸಂತೆ ನೆರೆದಿತ್ತು ಎಲ್ಲೆಡೆಯೂ ಗದ್ದಲ ಹಣ್ಣಿನಂಗಡಿ,  ತರಕಾರಿಯಂಗಡಿಗಳ ನಡುವಲ್ಲಿ ಜನರಿಂದ ಗಿಜಿಗುಡುವ ಒಂದು ಅಂಗಡಿ ಅದೇ ಮುಖವಾಡದಂಗಡಿ ಮುಖವಾಡ,  ಮುಖವಾಡ,  ತನ್ನತನವನೇ ಮರೆಯಿಸುವ ...

ಸಿಹಿ ನೆನಪಿನ ಸಂಚಿ

ನೀ ನನ್ನ ಸ್ವಂತ ಎಂಬ ಕನವರಿಕೆಯಲಿ ನೀನೀಗ ನನ್ನ ಜೊತೆಯಿಲ್ಲ ಎಂಬ ಕನಲಿಕೆಯೂ ಇದೆ ಈ ಕನಲಿಕೆ, ಕನವರಿಕೆಗಳ ನಡುವಲೂ ಒಂದು ಸಿಹಿಸುಖದ ಉಲುಹು ಇದೆ ಅದು ಸದಾ ನಿನ್ನನೇ ನೆನಪಿಸುತ್ತಿದೆ.